ಈ ಪುಟವನ್ನು ಪ್ರಕಟಿಸಲಾಗಿದೆ

ಒಳಸಂಚು

೧೬೭

ರಾಮರಾಜನನ್ನು ನೋಡುತ್ತ ಸುಮ್ಮನೆ ನಿಂತುಕೊಂಡನು.

ರಾಮರಾಜ-ಖಾನಸಾಹೇಬ, ಹೀಗೆ ಆಶ್ಚರ್ಯಪಡುವದೇಕೆ ? ನೀವು ನಮ್ಮ ಸೈನ್ಯದಲ್ಲಿ ಚಾಕರಿಗೆ ನಿಂತುಕೊಳ್ಳಿರಿ; ನಾನು ನಿಮಗೆ ದೊಡ್ಡ ಅಧಿಕಾರ ಕೊಡುತ್ತೇನೆ. ನಮ್ಮ ಹಿಂದೂ ಸರದಾರರ ಪಂಕ್ತಿಯಲ್ಲಿ ನಿಮ್ಮನ್ನು ಕೂಡಿಸುತ್ತೇನೆ. ನಿಮ್ಮನಂತು ನನ್ನ ಅಂಗರಕ್ಷಕರನ್ನಾಗಿ ನಿಯಮಿಸುವೆನು. ಯಾಕೆ ? ಏನೂ ಮಾತಾಡಲೊಲ್ಲಿರಿ ? ನಾನೇನು ಅಯೋಗ್ಯ ಮಾತುಗಳನ್ನಾಡಿರುವದಿಲ್ಲ. ನಿಮಗೆ ಅಯೋಗ್ಯವಾಗಿ ಕಂಡರೆ ಹೇಳಿರಿ.

ರಣಮಸ್ತಖಾನ-(ಹುಬ್ಬು ಗಂಟಿಕ್ಕಿ) ನಿಮ್ಮ ಯಾವತ್ತು ಮಾತುಗಳನ್ನು ಕೇಳಿ ನನಗೆ ಬಹಳ ಆಶ್ಚರ್ಯವಾಗಿದೆ ! ನಮ್ಮ ಒಡೆಯನ ಮೇಲೆ ತಿರುಗಿ ಬೀಳಲಿಕ್ಕೆ ಹೇಳಿದರೆ, ನಾನು ತಿರುಗಿ ಬಿದ್ದೇನೆಂಬ ನಂಬಿಗೆಯಾದರೂ ನಿಮಗೆ ಹ್ಯಾಗಾಯಿತು ?

ರಾಮರಾಜ-ತಿರುಗಿ ಬೀಳುವದೆ ? ಒಡೆಯನ ಮೇಲೆ ತಿರುಗಿ ಬೀಳುವದೇ ಖಾನಸಾಹೇಬ ! ಒಡೆಯನ ಮೇಲೆ ತಿರುಗಿ ಬೀಳಿರೆಂದು ಯಾರು ನಿಮಗೆ ಉಪದೇಶಿಸಿದರು ? ಇಂಥ ನೀಚತನಕ್ಕೆ ನಾನು ಸರ್ವಥಾ ಹೋಗತಕ್ಕವನಲ್ಲ; ಬಾದಶಹರಿಗೆ ನಿಮ್ಮ ಚಾಕರಿಯು ಮನಸ್ಸಿಗೆ ಬಂದಿರುವದಿಲ್ಲ; ನೀವು ಮನಃಪೂರ್ವಕವಾಗಿ ಸ್ವಾಮಿನಿಷ್ಠೆಯಿಂದ ಮಾಡಿದ ಕೆಲಸದ ಅಭಿನಂದನ ಮಾಡದೆ, ಅವರು ನಿಮ್ಮ ಉಪಹಾಸ ಮಾಡಿದರು ; ನಿಮ್ಮ ಸ್ವಾತಂತ್ರ್ಯವನ್ನು ನಷ್ಟಪಡಿಸಿ ನಿಮ್ಮ ಮೇಲಾಧಿಕಾರಿಯಾಗಿ ಬೇರೊಬ್ಬ ವಕೀಲನನ್ನು ಕಳಿಸಿಕೊಟ್ಟರು; ಆದ್ದರಿಂದ ನೀವು ಸ್ಪಷ್ಟರೀತಿಯಿಂದ ಬಾದಶಹರಿಗೆ- “ನಿಮ್ಮ ಚಾಕರಿಯನ್ನು ನಾನು ಒಲ್ಲೆನು” ಎಂದು ಹೇಳಿ ನನ್ನನ್ನು ಕೂಡಿಕೊಳ್ಳಿರೆಂದಿಷ್ಟೇ ನಿಮಗೆ ನಾನು ಹೇಳಿದೆನು. ಈ ಸರಳ ಮಾರ್ಗದಲ್ಲಿ ಒಡೆಯನ ಮೇಲೆ ತಿರುಗಿ ಬಿದ್ದ ಹಾಗೆ ಎಲ್ಲಿ ಆಗುತ್ತದೆ ? ನಾವು ಮಾಡುವ ಕೆಲಸವು ನಮ್ಮ ಯಜಮಾನನ ಮನಸ್ಸಿಗೆ ಬಾರದಿರುವಾಗ, ಮತ್ತೊಬ್ಬರು ನಮ್ಮನ್ನು ಆದರದಿಂದ ಚಾಕರಿಗೆ ಇಟ್ಟುಕೊಳ್ಳುತ್ತಿರಲು, ನಾವು ನಮ್ಮ ಮೊದಲಿನ ಯಜಮಾನನಿಗೆ ಸ್ಪಷ್ಟವಾಗಿ ಹೇಳಿ, ಆ ಎರಡನೆಯವರ ಚಾಕರಿ ಮಾಡುವಲ್ಲಿ ದ್ರೋಹವೇನು ? ಇದರಿಂದ ಒಡೆಯನ ಮೇಲೆ ತಿರುಗಿ ಬಿದ್ದಹಾಗೆ ಹ್ಯಾಗಾಯಿತು ? ಹೀಗೆ ಹೇಳದೆ ನಾನು ನಿಮಗೆ- “ನೀವು ಬಾದಶಹನ ನೌಕರರಾಗಿಯೇ ಇದ್ದು ಗುಪ್ತರೀತಿಯಿಂದ ನಮಗೆ ಸಹಾಯ ಮಾಡಿರಿ; ನಿಮ್ಮ ಬಾದಶಹರು ನಡಿಸಿದ ಒಳಸಂಚುಗಳನ್ನೂ, ಅವರ ಕಡೆಯ ಗುಪ್ತವಾದ ಸುದ್ದಿಗಳನ್ನೂ ನಮಗೆ ಗುಪ್ತರೀತಿಯಿಂದ ಹೇಳಿರಿ” ಎಂದು ಹೇಳಿದ್ದರೆ, ಆ