ಈ ಪುಟವನ್ನು ಪ್ರಕಟಿಸಲಾಗಿದೆ
೧೭೨
ಕನ್ನಡಿಗರ ಕರ್ಮಕಥೆ

ನನಗೆ ಬಹಳ ಸಂತೋಷವಾಯಿತು. ನಿಮ್ಮ ವಿಚಾರವು ಬಹು ಸಮರ್ಪಕವಾಗಿರುತ್ತದೆ. ನಾನು ನಿಮ್ಮ ಮಾತಿನಂತೆ ಅಕ್ಷರಶಃ ನಡೆಯುವೆನು. ಆದರೆ ನೀವು ಮೇಲಿಂದ ಮೇಲೆ ನನ್ನನ್ನು ಕಾಣದೆ ಮಾತ್ರ ಇರಬೇಡಿರಿ, ನಿಮ್ಮನ್ನು ಕಾಣದಿದ್ದರೆ.... ಎಂದು ನುಡಿಯುತ್ತಿರಲು, ರಣಮಸ್ತಖಾನನು ನಡುವೆ ಬಾಯಿ ಹಾಕಿ ಅದರ ಸಂಶಯವನ್ನು ನೀವು ಹಿಡಿಯಬಾರದು. ಅದರಂತೆ ನಾನೆಲ್ಲ ನಡೆದುಕೊಳ್ಳುವೆನು. ಸದ್ಯಕ್ಕೆ ನೀವು ಸಂತಾಪಗೊಂಡಂತೆ ಇಲ್ಲಿಂದ ಹೊರಟು ಹೋಗಿರಿ. ನಮ್ಮಿಬ್ಬರಲ್ಲಿ ವೈಮನಸ್ಸು ಉಂಟಾದ ವರ್ತಮಾನವು ಮಹಮೂದಖಾನನಿಗೂ, ಗುಪ್ತಚಾರರ ಮುಖಾಂತರ ಗೊತ್ತಾಗಲೆಬೇಕು. ನೀವು ಅತ್ತ ಹೋದನಂತರ ನಾನು ನಿಮಗೆ ಬಾಯಿಂದ ಬಂದಹಾಗೆ ಅಂದೆನು. ಅದನ್ನು ನೀವು ಮನಸ್ಸಿಗೆ ಹಚ್ಚಿಕೊಳ್ಳಬೇಡಿರಿ. ತಿರುಗಿ ನನ್ನ ಮೇಲೆ ಸಿಟ್ಟಾದಂತೆ ತೋರಿಸಿರಿ, ಎಂದು ಹೇಳಿದನು. ಅದಕ್ಕೆ ರಾಮರಾಜನು-ಇಲ್ಲ, ಮನಸ್ಸಿಗೆ ಹಚ್ಚಿಕೊಳ್ಳುವದಿಲ್ಲ. ನಿಮ್ಮ ವಿಷಯವಾಗಿ ನನ್ನಲ್ಲಿ ತಿರಸ್ಕಾರವು ಉತ್ಪನ್ನವಾದಂತೆ ತೋರಿಸುವೆನು. ಇಲ್ಲಿಂದ ನಿಮ್ಮನ್ನು ವಿಜಾಪುರಕ್ಕೆ ಕರೆಸಿಕೊಳ್ಳಬೇಕೆಂದು ಬಾದಶಹನಿಗೆ ಸಹ ತಿಳಿಸುವೆನು, ಎಂದು ನುಡಿದನು. ಮತ್ತೆ ಕೆಲವು ಮಾತುಕಥೆಗಳು ನಡೆದ ಬಳಿಕ ರಾಮರಾಜನು ಸಂತಾಪದಿಂದ ಬಂಗಲೆಯಿಂದ ಹೊರಬಿದ್ದು, ಸಿಟ್ಟಿನಿಂದ ಉರಿಯುತ್ತ ವಿಜಯನಗರದ ಕಡೆಗೆ ಸಾಗಿದನು.


****