ಈ ಪುಟವನ್ನು ಪ್ರಕಟಿಸಲಾಗಿದೆ

೨೧೪
ಕನ್ನಡಿಗರ ಕರ್ಮಕಥೆ

ಎಬ್ಬಿಸಿದನು. ಕಾವಲುಗಾರನು ಅರನಿದ್ದೆಯಲ್ಲಿದ್ದದ್ದರಿಂದ, ಆತನು ಬಹಳ ಹೊತ್ತಿನವರೆಗೆ ರಾಮರಾಜನ ಕೂಗನ್ನು ಲೆಕ್ಕಿಸಲೇ ಇಲ್ಲ. ಕಡೆಗೆ- “ಯಾವನವನು? ರಾತ್ರಿಯಲ್ಲಿ ಕಿಟಿಕಿಟಿ ಹಚ್ಚಿರುತ್ತಾನೆ” ಎಂದು ಒಟಗುಟ್ಟಿ ಬಾಗಿಲು ತೆರೆದನು, ಆಗ ರಾಮರಾಜನು ಆತನಿಗೆ- “ರಣಮಸ್ತಖಾನನು ನನ್ನನ್ನು ಮಾಸಾಹೇಬರ ಕಡೆಗೆ ಕಳಿಸಿರುತ್ತಾರೆ. ಬಹಳ ಅವಸರದ ಕೆಲಸವಿರುತ್ತದಂತೆ. ನೀನು ಹೋಗಿ ಮಾಸಾಹೇಬರಿಗೆ ಸುದ್ದಿಯನ್ನು ತಿಳಿಸಿ, ಅವರಿಗೆ ನನ್ನ ಭೆಟ್ಟಿಯನ್ನು ಮಾಡಿಸು. ಅವರು ನಿದ್ದೆ ಹತ್ತಿ ಮಲಗಿದ್ದರೂ ಎಬ್ಬಿಸು. ಕೆಲಸವು ಬಹಳ ನಾಜೂಕು ಇರುತ್ತದೆ” ಎಂದು ಹೇಳಿದನು; ಆದರೆ ಕಾವಲುಗಾರನು ರಾಮರಾಜನ ಮಾತಿಗೆ ಒಪ್ಪಿಕೊಳ್ಳದೆ, “ಅಪರಾತ್ರಿಯು, ಎಲ್ಲಿ ಎಬ್ಬಿಸಲೆಂದು ಗೊಣಗುಟ್ಟಹತಿದನು. ಆತನು ರಾಮರಾಜನಿಗೆ- ಈಗ ನಾನು ಕಾವಲಿಗೆ ಒಬ್ಬನೇ ಇದ್ದೇನೆ. ಬಂಗಲೆಯೊಳಗೂ ಸೇವಕರು ಯಾರೂ ಇಲ್ಲ. ಎಲ್ಲ ಜನರು ದೊಡ್ಡ ಖಾನಸಾಹೇಬರ ಕಡೆಗೆ ಹೋಗಿದ್ದಾರೆ. ಆ ಮುದುಕಿಯೂ ಇಂದು ಎಲ್ಲಿಯೋ ಹೋಗಿಬಿಟ್ಟಿದ್ದಾಳೆ. ಇನ್ನು ಮಾಸಾಹೇಬರನ್ನು ಎಬ್ಬಿಸಲಿಕ್ಕೆ ಹೋಗಬೇಕಾದರೆ, ಅವರ ಕೋಣೆಯ ಬಾಗಿಲತನಕ ಹೋಗಬೇಕು ಈಗ ಯಾರು ಹೋಗುವರು ? ಈಗ ಆಗುವುದಿಲ್ಲ. ಮುಂಜಾನೆ ನೋಡೋಣವಂತೆ ಈಗ ಸರಿರಾತ್ರಿಯಾಗಿರುವದು” ಎಂದು ಒದರಾಡಹತ್ತಿದನು. ಆಗ ರಾಮರಾಜನು-ಛೇ, ಛೇ, ಹೀಗೆ ಮಾಡಿದರೆ ಹ್ಯಾಗೆ? ಖಾನಸಾಹೇಬರು ನನ್ನನ್ನು ಬುದ್ಧಿಪೂರ್ವಕವಾಗಿ ಇದಕ್ಕೆ ಕಳಿಸಿರುವರೇನು? ಹ್ಯಾಗಾದರೂ ಮಾಡಿ ಈ ದಿನ ರಾತ್ರಿಯೇ ಮಾಸಾಹೇಬರಿಗೆ ಸುದ್ದಿಯನ್ನು ಮುಟ್ಟಿಸಬೇಕೆಂದು ಅವರು ಹೇಳಿರುವರು. ಹ್ಯಾಗಾದರೂ ಮಾಡು, ನಾನು ಬಂದ ಸುದ್ದಿಯನ್ನಷ್ಟು ಮಾಸಾಹೇಬರಿಗೆ ಹಚ್ಚಿ ನಮ್ಮಿಬ್ಬರ ಭೆಟ್ಟಿಯನ್ನು ಮಾಡಿಸಬೇಕು. ನಿನ್ನ ಶ್ರಮವು ವ್ಯರ್ಥವಾಗಲಿಕ್ಕಿಲ್ಲ. ಎಂದು ಹಲವು ವಿಧವಾಗಿ ಹೇಳಿಕೊಳ್ಳಲು, ಆ ಕಾವಲುಗಾರನು ನಿರ್ವಾಹವಿಲ್ಲದೆ ರಾಮರಾಜನಿಗೆ-ಇಲ್ಲಿಯೇ ನೀನು ಬಾಗಿಲು ಕಾಯುತ್ತ ಇರೆಂದು ಗಟ್ಟಿಮುಟ್ಟಿಯಾಗಿ ಹೇಳಿ, ಆ ಬಾಗಿಲನವನು ಪುನಃ ಇಕ್ಕದೆ ಮಾಸಾಹೇಬರ ಬಂಗಲೆಯ ಕಡೆಗೆ ಹೊರಟು ಹೋದನು. ಇತ್ತ ರಾಮರಾಜನು ಒಂದೆರಡು ಕ್ಷಣ ಅಲ್ಲಿ ನಿಂತಿರಬಹುದು. ಅಷ್ಟರಲ್ಲಿ ಆತನ ದೃಷ್ಟಿಯು ಪುಷ್ಕರಣಿಯ ಕಡೆಗೆ ಹೋಗಲು, ಅತ್ತ ಕಡೆಗೆ ಹೋಗುವ ಇಚ್ಛೆಯು ಆತನಿಗೆ ಉತ್ಪನ್ನವಾದದ್ದರಿಂದ, ಆತನು ಯಾವ ವಿಚಾರವನ್ನೂ ಮಾಡದೆ ಅತ್ತ ಕಡೆಗೆ ಹೋಗಿಬಿಟ್ಟನು.