ಕುಳಿತು ದಂಡೆಯ ಕಡೆಗೆ ಬರುವಾಗ ಮೆಹರ್ಜಾನಳು ನುಡಿದ ಶಬ್ದಗಳ ನೆನಪು ಈಗ ಆತನಿಗಾಗಿತ್ತು. ಹಾಗೆ ನೆನಪಾದದ್ದರಿಂದಲೇ ಆತನ ಆನಂದವು ನಷ್ಟವಾಗಿ ಆತನು ತನ್ನೊಳಗೆ- “ಆಗ ಹಾಗೆ ನಾವು ಮುಳುಗಿಹೋಗಿದ್ದರೆ ಏನಾಗುತ್ತಿತ್ತು ? ಈ ಮುಂದಿನ ಎಲ್ಲ ತೊಡಕುಗಳು ಉಂಟಾಗುತ್ತಿದ್ದಿಲ್ಲ. ಆಕೆಯೂ ನಾನು ಎಲ್ಲಿಯಾದರೂ ಒತ್ತಟ್ಟಿಗೆ ಸುಖದ ಶಿಖರವನ್ನೇರಿ, ಇಲ್ಲವೆಯಾರಿಗೆ ಗೊತ್ತು, ದುಃಖದ ಕೂಪದಲ್ಲಿ ಬಿದ್ದಿರುತ್ತಿದ್ದೆವು. ಏನೇ ಆಗಲಿ ನಾವಿಬ್ಬರು ಈ ಲೋಕದಿಂದ ಕೂಡಿಯೇ ಹೋಗಿದ್ದರೆ ನಮ್ಮಿಬ್ಬರ ಅಕೃತ್ರಿಮ ಪ್ರೇಮವನ್ನು ನೋಡಿ ಪರಮೇಶ್ವರನು ನಿಶ್ಚಯವಾಗಿ ನಮ್ಮನ್ನು ಏಕತ್ರವಾಗಿ ಇಡುತ್ತಿದ್ದನು.
ಹೀಗೆ ಏನೇನೋ ಅಲ್ಲಿಯ ಇಲ್ಲಿಯ ವಿಚಾರಗಳು ರಾಮರಾಜನ ಮನಸ್ಸಿನಲ್ಲಿ ಎಡತಾಕುತ್ತಿರಲು, ಆತನಿಗೆ ತಾನು ಕಾವಲುಗಾರನನ್ನು ಮೆಹರ್ಜಾನಳ ಕಡೆಗೆ (ಮಾಸಾಹೇಬರ ಕಡೆಗೆ) ಕಳಿಸಿಕೊಟ್ಟದ್ದು ನೆನಪಾಯಿತು. ಕೂಡಲೆ ಆತನ ಮನಸ್ಸು ಅತ್ತಕಡೆಗೆ ಹರಿಯಹತ್ತಿ, ಆತನು ತನ್ನ ಮನಸ್ಸಿನಲ್ಲಿ- “ಕಾವಲುಗಾರನು ಇಷ್ಟುಹೊತ್ತಿಗೆ ಮೆಹರ್ಜಾನಳನ್ನು ಕಂಡು ಅಲ್ಲಿಗೆ ಬಂದಿರಬಹುದಲ್ಲವೇ ? ಆತನು ನನ್ನ ಕುದುರೆಯು ಅಲ್ಲಿಯೇ ಇರುವದನ್ನು ನೋಡಿ ಅತ್ತಿತ್ತ ನನ್ನನ್ನು ಶೋಧಿಸುತ್ತಿರಬಹುದು. ಆದ್ದರಿಂದ ನಾನು ಅಲ್ಲಿಗೆ ಹೋಗತಕ್ಕದ್ದು, ಎಂದು ಯೋಚಿಸಿ, ನಾಲ್ಕು ಹೆಜ್ಜೆ ಮುಂದಕ್ಕೆ ಬಂದಿರಬಹುದು; ಅಷ್ಟರಲ್ಲಿ ಆತನಿಗೆ ಸ್ವಲ್ಪ ದೂರದಲ್ಲಿ ಯಾರೋ ಬರುತ್ತಿರುವಂತೆ ತೋರಿ, ಆತನು ಅಲ್ಲಿಯೇ ನಿಂತುಕೊಂಡನು. ಆತನು ದಿಟ್ಟಿಸಿ ನೋಡಲು, ಒಂದು ಶುಭ್ರ ವಸ್ತುವೇಷ್ಟಿತ ಮೂರ್ತಿಯು ಆತನ ಕಣ್ಣಿಗೆ ಬಿದ್ದಿತ್ತು. ಈ ಮೂರ್ತಿಯು ಯಾರಿರಬಹುದೆಂಬ ಶಂಕೆಯು ಲೇಶವಾದರೂ ಆತನಿಗಿದ್ದಿಲ್ಲ. ಈ ಮೂರ್ತಿಯು ತನ್ನ ಪ್ರಿಯ ಮೆಹರ್ಜಾನಳು, ಅಥವಾ ಈಗಿನ ಹೆಸರಿನಂತೆ ಮಾಸಾಹೇಬರು, ಎಂದು ಆತನು ನಿಶ್ಚಯಿಸಿದನು. ಹಿಂದಕ್ಕೆ ರಣಮಸ್ತಖಾನನ ಸಂಗಡ ಪುಷ್ಕರಣಿಯಲ್ಲಿ ಸಂಚರಿಸುತ್ತಿರುವಾಗ ಒಮ್ಮೆ ಅದೇ ಶುಭಮೂರ್ತಿಯನ್ನು ನೋಡಿದ್ದು ಆತನ ಸ್ಮರಣಕ್ಕೆ ಬಂದಿತು. ಇಷ್ಟು ರಾತ್ರಿಯಲ್ಲಿ ಈಕೆಯು ಇಲ್ಲಿಗೆ ಯಾಕೆ ಬಂದಿರಬಹುದೆಂದು ಆತನು ಆಲೋಚಿಸತೊಡಗಿದನು. ಕಾವಲುಗಾರನು ಹೇಳಿದ್ದರಿಂದ ಆಕೆಯು ಇಲ್ಲಿಗೆ ಬಂದಿರಬಹುದೋ, ಛೇ ಛೇ ಹಾಗೆ ಬರುವ ಸಂಭವವಿಲ್ಲ. ಆಕೆಯು ಕಾವಲುಗಾರನ ಮುಖಾಂತರ ತಾನಿದ್ದಲ್ಲಿಗೆ ನನ್ನನ್ನು ಕರೆಸಿಕೊಳ್ಳುತ್ತಿದ್ದಳು. ಇಲ್ಲವೆ ಮಗನ ಮೇಲಿನ ಸಂತಾಪವು ಕಡಿಮೆಯಾಗದೆ ಇದ್ದ ಪಕ್ಷದಲ್ಲಿ ನನ್ನನ್ನು ಕಾಣಲಿಚ್ಚಿಸದೆ “ಮಗನೂ ಬೇಡ. ಆತನು ಹೇಳಿಕಳಿಸಿದ