ಇಲ್ಲವೆ ಹೀಗೆ ಮಾಡಬಾರದು, ಎಂದು ಒಮ್ಮೆ ನಿರ್ಧಾರವಾದರೆ ತೀರಿತು. ಮುಂದೆ ಎಂಥ ಪ್ರಸಂಗಗಳು ಒದಗಿದರೂ ಅವರ ನಿಶ್ಚಯದಲ್ಲಿ ಅಂತರವಾಗಲಿಕ್ಕಿಲ್ಲ. ಅವರು ಸುರಕ್ಷಿತವಾಗಿರುವರೆಂಬ ಸುದ್ದಿಯಷ್ಟು ಈಗ ನನಗೆ ತಿಳಿದರೆ ಸಾಕು, ಅವರು ಆತ್ಮಹತ್ಯೆ ಮಾಡಿಕೊಂಡಿದ್ದರೂ, ಒಂದು ವಿಧದಿಂದ ನೆಟ್ಟಗಾಯಿತೆಂತಲೇ ನಾನು ತಿಳಿಯುವೆನು ! ಯಾಕೆಂದರೆ, ನನ್ನ ಕೈಯಿಂದ ಇನ್ನು ಏನಾದರೂ ಅನನ್ವಿತ ಕೃತ್ಯಗಳೂ ಘಟಿಸಬೇಕಾಗಿದ್ದರೆ, ಅವನ್ನು ನೋಡುವ ಪ್ರಸಂಗವಾದರೂ ಅವರಿಗೆ ತಪ್ಪಿತು.
ರಾಮರಾಜ- (ಚಮತ್ಕಾರದ ಧ್ವನಿಯಿಂದ) ಅವರು ಇಷ್ಟು ದೃಢನಿಶ್ಚಯದ ಸ್ವಭಾವದವರಿರುತ್ತಾರೆಯೆ ? ಅವರು ತಿರುಗಿ ಮುಖಾವಲೋಕನವನ್ನು ಸಹ ಮಾಡಲಿಕ್ಕಿಲ್ಲೆನ್ನುತ್ತೀರಾ ?
ರಣಮಸ್ತಖಾನ್-ಇಲ್ಲ, ಅವರು ತಿರುಗಿ ನನ್ನ ಮುಖಾವಲೋಕನವನ್ನು ಸಹ ಮಾಡಲಿಕ್ಕಿಲ್ಲ. ನಾನು ತಮ್ಮ ಪಾಲಿಗೆ ಸತ್ತಿರುವೆನೆಂತಲೇ ಅವರು ತಿಳಕೊಂಡಿರುವರು. ತಮಗೆ ಅವರ ಸ್ವಭಾವದ ಪರಿಚಯವಿಲ್ಲ, ಅವರು ಬಹಳ ಕ್ರಿಯಾವಂತರು; ಬಹು ನಿಸ್ಪೃಹಿಗಳು; ಅವರ ಸ್ವಭಾವವು ಪ್ರೇಮವಿದ್ದಷ್ಟೇ ಕಠೋರವು ಆಗಿರುವದು. ಪ್ರೇಮಮಾಡುವ ಪ್ರಸಂಗದಲ್ಲಿ ಅವರು ಅತ್ಯಂತ ಪ್ರೇಮ ಮಾಡುವರು; ಪ್ರೇಮದ ಭರದಲ್ಲಿ ಅವರು ತಮ್ಮ ಜೀವದ ಹಂಗು ಸಹ ತೊರೆಯುವರು; ಆದರೆ ಯಾವದೊಂದು ಕಾರಣದಿಂದ ಅವರು ಒಬ್ಬರನ್ನು ದ್ವೇಷಿಸಹತ್ತಿದರೆಂದರೆ, ತಿರುಗಿ ಅವರ ಮುಖಾವಲೋಕನವನ್ನು ಸಹ ಮಾಡಲಿಕ್ಕಿಲ್ಲ. ನನ್ನ ಮನಸ್ಸಿನೊಳಗಿನ ವಿಚಾರಗಳು ಅನ್ಯರಿಗೆ ಗೊತ್ತಾಗವು ಮಹಾರಾಜ, ನನ್ನ ತಾಯಿಯೆಂದರೆ ನನ್ನ ಸರ್ವಸ್ವವು; ನನ್ನ ತಾಯಿಯು ನನ್ನ ಪಂಚಪ್ರಾಣವು. ನನ್ನ ತಾಯಿಯು ನನ್ನನ್ನು ಸಂರಕ್ಷಿಸುವಾಗ ಮಣ್ಣಿಗೆ ಮಣ್ಣು ಕೂಡಿದಳು. ಅಂಥವಳ ದ್ರೋಹವನ್ನು ಬಗೆದು ನಾನು ನಿಮ್ಮನ್ನು ಕೂಡಿಕೊಂಡೆನು.
ಮುಂದೆ ಆತನಿಂದ ಮಾತಾಡುವದಾಗಲೊಲ್ಲದು, ಆತನು ಸುಮ್ಮನೆ ಕುಳಿತುಕೊಂಡನು. ಆಮೇಲೆ ಮತ್ತೆ ಅವರು ರಾಮರಾಜನನ್ನು ಕುರಿತು-ಸರಕಾರ್-ಇನ್ನು ಹೇಳುವದೇನು ! ನೀವು ವಿಚಾರಮಾಡಿರಿ, ನನ್ನನ್ನು ವಿಜಾಪುರಕ್ಕೆ ಕಳಿಸುವದಾದರೆ ಕಳಿಸಿಬಿಡಿರಿ. ನೀವು ನನಗೆ ಆಶ್ರಯಕೊಟ್ಟು ಇಡಿಯ ರಾಜ್ಯದ ಮೇಲೆ ಸಂಕಟವನ್ನಾದರೂ ಯಾಕೆ ತಂದುಕೊಳ್ಳುತ್ತೀರಿ ! ಸರ್ವಥಾ ತಂದುಕೊಳ್ಳಬೇಡಿರಿ, ನನ್ನಿಂದ ನಿಮಗೆ ಅಷ್ಟು ಪ್ರಯೋಜನವಾಗದು. ಯಾರಿಗೆ ಗೊತ್ತು, ಮುಂದೆ ಎಲ್ಲಿಯಾದರೂ ನನ್ನ ಪ್ರಾಮಾಣಿಕತನದ ಬಗ್ಗೆ ನಿಮಗೆ