ಈ ಪುಟವನ್ನು ಪ್ರಕಟಿಸಲಾಗಿದೆ

೨೨೮
ಕನ್ನಡಿಗರ ಕರ್ಮಕಥೆ

ಕಿವಿಯವರೆಗೆ ಮುಟ್ಟಿದವು; ಈ ಪ್ರಸಂಗದಲ್ಲಿ ಕೈಗಾದರೆ ನಮ್ಮದಿಷ್ಟೇ ಅಲ್ಲ, ಎಲ್ಲ ಮುಸಲ್ಮಾನ ಬಾದಶಹರ ಗೌರವವೇ ನಷ್ಟವಾಗಿ, ಬಾದಶಾಹಿಗಳು ಮುಳುಗುವ ಪ್ರಸಂಗ ಒದಗಬಹುದೆಂದು ಬಹುಜನರು ಬಾದಶಹನಿಗೆ ಸ್ಪಷ್ಟವಾಗಿ ಪ್ರತಿಪಾದಿಸಹತ್ತಿದರು. ಬಾದಶಹನಾದರೂ ತನ್ನ ಜನರ ಯುದ್ಧೋತ್ಸಾಹವನ್ನು ನೋಡಿ, ಮನಸ್ಸಿನಲ್ಲಿ ಸಂತೋಷಪಟ್ಟನು. ಆತನು ವಿಜಯನಗರದ ರಾಜ್ಯವನ್ನು ಮುಳುಗಿಸುವದಕ್ಕಾಗಿ ಬಹು ದಿವಸಗಳಿಂದ ಕಪಟೋಪಾಯವನ್ನು ಯೋಚಿಸಿದ್ದು, ಆ ಉಪಾಯಗಳೆಲ್ಲ ಸಿದ್ಧಿಸುತ್ತ ಬಂದದ್ದರಿಂದ, ಈಗ ಆತನೊಬ್ಬನೆ ವಿಜಯನಗರದ ರಾಜ್ಯವನ್ನು ನಾಶಮಾಡಬಹುದಾಗಿತ್ತು; ಆದರೂ ಆ ದೂರ್ತನಾದ ಬಾದಶಹನು ವಿಜಯನಗರದ ಪ್ರಚಂಡ ಸೈನ್ಯದ ಕಡೆಗೆ ನೋಡಿ, ಅಪ್ಪಿತಪ್ಪಿ ತನಗೆ ಅಪಜಯವಾದರೆ ತನ್ನ ಪರಿಣಾಮವು ನೆಟ್ಟಗಾಗಲಿಕ್ಕಿಲ್ಲವೆಂದು ತಿಳಿದು, ಉಳಿದ ಇಬ್ಬರು ಬಾದಶಹರನ್ನು ತನ್ನ ಕಡೆಗೆ ಮಾಡಿಕೊಳ್ಳುವ ಎತ್ತಿಗಡೆಯನ್ನು ಮಾಡತೊಡಗಿದ್ದನು. ಸುದೈವದಿಂದ ಆತನ ಯತ್ನವು ಸಫಲವಾಗುವ ಯೋಗವು ಸಮೀಪಿಸತೊಡಗಿತ್ತು. ಆತನು ಗೋವಳಕೊಂಡ, ಅಹಮ್ಮದನಗರಗಳ ಬಾದಶಹರಿಗೆ ತನ್ನ ವಕೀಲರ ಮುಖಾಂತರವಾಗಿ- “ಈ ಪ್ರಸಂಗದಲ್ಲಿ ನೀವು ನನ್ನ ಮಾತನ್ನು ದುರ್ಲಕ್ಷಿಸಬಾರದೆಂದು ನಿಮಗೆ ನಾನು ಹೇಳಿಕೊಳ್ಳುವೆನು, ನಮ್ಮಲ್ಲಿ ಒಕ್ಕಟ್ಟು ಇಲ್ಲದ್ದರಿಂದಲೇ ವಿಜಯನಗರದ ಅರಸರು ನಮ್ಮ ಎದೆಯಮೇಲೆ ಕುಳಿತಂತಾಗಿರುತ್ತದೆ. ನಾವು ಒಕ್ಕಟ್ಟಿನಿಂದ ನಡೆದಿದ್ದರೆ ಕಾಫರರ ಆ ರಾಜ್ಯವು ಇಷ್ಟುಹೊತ್ತಿಗೆ ನಾಮಶೇಷವಾಗುತ್ತಿತ್ತು. ರಾಮರಾಜನಿಂದ ಈವೊತ್ತಿನವರೆಗೆ ನಮಗಾದ ಅಪಮಾನವನ್ನೂ, ನಮ್ಮ ಪ್ರಜೆಗಳಿಗಾದ ಪೀಡೆಯನ್ನೂ ನೆನಪಿಗೆ ತಂದುಕೊಳ್ಳೋಣ, ಅದೆಲ್ಲದರ ಸೇಡು ತೀರಿಸಿಕೊಂಡು ಇಸ್ಲಾಮಿಗೆ ತಖ್ತೆಗಳ ಗೌರವ ಕಾಯ್ದುಕೊಳ್ಳುವ ಇಚ್ಛೆಯು ತಮ್ಮಲ್ಲಿದ್ದರೆ, ನಮ್ಮ ಒಡಕುಗಳನ್ನೆಲ್ಲ ಮರೆತು, ಈಗ ನಾವು ಒಕ್ಕಟ್ಟಿನಿಂದ ನಡೆಯಲಿಕ್ಕೆಬೇಕು. ನಾವು ಮೂವರು ಒಕ್ಕಟ್ಟಾದರೆ, ಸಂಪತ್ತಿನಿಂದ ತುಂಬಿತುಳುಕುವ ವಿಜಯನಗರವನ್ನು ಸಲಿಯುವದೂ, ವಿಸ್ತಾರವಾಗಿ ಬೆಳೆದ ಆ ವಿಜಯನಗರದ ರಾಜ್ಯವನ್ನು ನಮ್ಮೊಳಗೆ ಬೇಕಾದ ಹಾಗೆ ಹಂಚಿಕೊಳ್ಳುವದೂ ಅಸಾಧ್ಯವಲ್ಲ. ಈ ಸಂಬಂಧದಿಂದ ನಾವು ಮೂವರು ಒತ್ತಟ್ಟಿಗೆ ಪ್ರತ್ಯಕ್ಷ ಕೂಡಿ ಆಲೋಚಿಸುವದು ನೆಟ್ಟಗೆ, ಆ ಯೋಗವನ್ನು ತಂದುಕೊಳ್ಳಲಿಕ್ಕೆ ನಾನು ಸಿದ್ಧನಿದ್ದೇನೆ. ನೀವು ಬರಹೇಳಿದರೆ ನಿಮ್ಮಲ್ಲಿಗೆ ನಾನು ಬರುವೆನು. ನೀವು ನಮ್ಮಲ್ಲಿಗೆ ಬಂದರೂ ಸರಿಯೇ. ಬೇರೆ ಯಾರ ರಾಜ್ಯದಲ್ಲಾದರೂ ನಾವು ಮೂವರು ಒತ್ತಟ್ಟಿಗೆ ಕೂಡೋಣವೆಂದರೆ, ಅದಕ್ಕೂ ನಾನು ಒಪ್ಪಕೊಳ್ಳುವೆನು,