ಈ ಪುಟವನ್ನು ಪ್ರಕಟಿಸಲಾಗಿದೆ

ನಿಗ್ಗರದ ಉತ್ತರ
೨೩೩

ನಿನ್ನ ಲಗ್ನಮಾಡಿ, ನೀನು ಆನಂದಪಡುವದನ್ನು ಕಣ್ಣುತುಂಬ ನೋಡುವೆನು. ಇದು ನನ್ನ ಪ್ರತಿಜ್ಞೆಯೆಂದು ತಿಳಿ” ಅನ್ನಲು ಈ ಮಾತಿನಿಂದ ರಣಮಸ್ತಖಾನನ ಸಿಟ್ಟು ಹೆಚ್ಚಿದರೂ ಅದನ್ನು ಆತನು ನುಂಗಿಕೊಂಡು ಹೌದು, ನಾನು ನಿಮ್ಮ ಮುಂದೆ ಇನ್ನುಯಾಕೆ ಮುಚ್ಚಲಿ ? ನೀವು ಅನ್ನುವಂತೆ ನನ್ನ ಮನಸ್ಸಿನ ಸ್ಥಿತಿಯಾಗಿರುತ್ತದೆಂಬದು ನಿಜವು. ನನ್ನ ಅರಗಿಳಿಯ ಸಂಬಂಧದಿಂದ ನನ್ನ ಉಪಮರ್ದವಾಗದಿದ್ದರೆ, ನಾನು ನಿಮ್ಮ ಪಕ್ಷವನ್ನೇ ಸ್ವೀಕರಿಸುತ್ತಿದ್ದಿಲ್ಲ ಆ ಉಪಮರ್ದವು ನನ್ನನ್ನು ನಿಮ್ಮ ಕಡೆಗೆ ಎಳಕೊಂಡು ಬಂದಂತೆ ಆಗಿರುತ್ತದೆ. ಆ ಉಪಮರ್ದವನ್ನು ನಾನು ಮರೆಯಬೇಕಾದರೆ, ಪರಾಕ್ರಮದಿಂದ ಅರಗಿಳಿಯನ್ನು ಹಿಡತರಲೇ ಬೇಕು, ಎಂದು ನುಡಿಯುತ್ತಿರಲು, ರಾಮರಾಜನು ನಡುವೇ ಬಾಯಿಹಾಕಿ-ಅಲಬತ್, ಅಲಬತ್ ಹಾಗೆ ಆಗಲೇಬೇಕು, ನಾನು ಆ ಕೆಲಸವನ್ನು ಅವಶ್ಯವಾಗಿ ಮಾಡುವೆನು. ಈಗ ನಾನು ಬಾದಶಹನಿಗೆ ಉತ್ತರವನ್ನು ಬರೆದು, ಅದರಲ್ಲಿ ನಿನ್ನ ಆ ಅರಗಿಳಿಯನ್ನು ನಮಗೆ ಒಪ್ಪಿಸಬೇಕೆಂತಲೂ, ಹಾಗೆ ಒಪ್ಪಿಸದಿದ್ದರೆ ಅದನ್ನು ಹಿಡಕೊಂಡು ಬರುವದಕ್ಕಾಗಿ ನಾವೇ ವಿಜಾಪುರದ ಮೇಲೆ ಸಾಗಿಬರುವೆವೆಂತಲೂ ಕಾಣಿಸುವೆನು. ನಿನ್ನನ್ನು ಹಿಡಿಕೊಂಡು ಹೋಗಲಿಕ್ಕೆ ವಿಜಯನಗರದ ಮೇಲೆ ಸಾಗಿಬರುವ ಬಾದಶಹನಿಗೆ, ಹೀಗೆ ಬರೆಯದಿದ್ದರೆ ಹ್ಯಾಗೆ ?

ಈ ಮೇರೆಗೆ ನುಡಿದು ರಾಮರಾಜನು ಬಾದಶಹನಿಗೆ ಉತ್ತರವನ್ನು ಬರೆದನು. ಅದರಲ್ಲಿ ಆತನು ರಣಮಸ್ತಖಾನನನ್ನು ತಮಗೆ ಒಪ್ಪಿಸುವದು ನಮ್ಮ ಹಿಂದೂಜನರ ಶೀಲಕ್ಕೆ ವಿರುದ್ಧವಾಗಿರುತ್ತದೆ. ನಮ್ಮ ಆಶ್ರಯವನ್ನು ಪಡೆದವನು, ನಮ್ಮಲ್ಲಿ ಸಂರಕ್ಷಣೆ ಮಾಡುವ ಸಾಮರ್ಥ್ಯವಿರುವವರೆಗೆ ನಮ್ಮ ಬಳಿಯಲ್ಲಿಯೇ ಇರತಕ್ಕವನು ನಮ್ಮ ಸಂಪೂರ್ಣ ಉಚ್ಛೇದವಾದಾಗ, ಆತನಿಗೆ ನಮ್ಮ ಆಶ್ರಯವು ತಪ್ಪಿತು; ನೀವು ಸುಮ್ಮನೆ ಇಲ್ಲದ ಆಗ್ರಹ ತೊಟ್ಟು ನಮ್ಮ ಸಂಗಡ ಯುದ್ದಕ್ಕೆ ಸಿದ್ದವಾಗಬಾರದು. ರಣಮಸ್ತಖಾನನು ಹೇಳಿಕೇಳಿ ನಿಮ್ಮ ನೌಕರಿಯನ್ನು ಬಿಟ್ಟು ನಮ್ಮಲ್ಲಿ ನೌಕರನಾದರೆ, ವಿಶ್ವಾಸಘಾತವು ಹ್ಯಾಗಾಯಿತೋ ನಮಗೆ ತಿಳಿಯದು. ನಮಗೂ ನಿಮಗೂ ಸ್ನೇಹವಿರುತ್ತದೆ. ಆ ಸ್ನೇಹವನ್ನು ಕೆಡಸಿಕೊಳ್ಳಲಿಕ್ಕೆ ಏನೂ ಕಾರಣವಿಲ್ಲ. ಏನಾದರೂ ಇಲ್ಲದ ನೆವಮಾಡಿ ಸ್ನೇಹಸಂಬಂಧವನ್ನು ಕೆಡಿಸಿಕೊಳ್ಳಬೇಕೆಂದು ನೀವು ಮಾಡಿರುವಂತೆ ತೋರುತ್ತದೆ, ಹೀಗಿದ್ದರೆ, ನಿಮ್ಮ ಇಚ್ಚೆಯು, ನಿಮ್ಮ ಮನಸ್ಸಿಗೆ ಬಂದಂತೆ ಮಾಡಿರಿ, ನೀವು ನಮ್ಮ ಸಂಗಡ ಸ್ನೇಹದಿಂದಿರುವದೇ ನಿಜವಿದ್ದರೆ, ನಿಮ್ಮ ಒಬ್ಬ ನೌಕರನು ನಮ್ಮ ಕಡೆಗೆ ಬಂದಿರಲು,