ಈ ಪುಟವನ್ನು ಪ್ರಕಟಿಸಲಾಗಿದೆ

೧೦
ಕನ್ನಡಿಗರ ಕರ್ಮಕಥೆ

ನಿಮ್ಮ ಈ ಆತುರದ ಪ್ರೇಮವು ಕಡೆತನಕ ನನ್ನ ಮೇಲೆ ನಿಲ್ಲುವದೆಂತಲೂ ಹೇಳಲಾಗವುದಿಲ್ಲ. ನನ್ನ ಮುಸಲ್ಮಾನ ಧರ್ಮಕ್ಕೆ ಕಳಂಕ ಉಂಟಾಗುವ ಕೆಲಸವನ್ನು ನೀವು ಮಾಡಿ, ಕಡೆಗೆ ಪ್ರಸಂಗವಶಾತ್ ಪ್ರೇಮಭಂಗವನ್ನು ಮಾಡಿದರೆ, ನೀವಾಗಿ ವಿನಾಶಾಂಕುರವನ್ನು ಉತ್ಪನ್ನ ಮಾಡಿದ ಹಾಗಾದೀತು. ಈ ಮಾತನ್ನು ನಾನು ಕಲಿತು ಆಡುತ್ತೇನೆಂದು ತಿಳಿಯಬೇಡಿರಿ. ಅಲ್ಲಾನೇ ನನ್ನ ಮುಖದಿಂದ ಈ ಮಾತನ್ನು ಆಡಿಸುವನೆಂದು ತಿಳಿಯಿರಿ, ಎಂದು ನುಡಿಯುತ್ತಿರಲು, ರಾಮರಾಜನು ಆತುರದಿಂದ-ಆಗಲಿ, ನಾನು ಹಾಗೆ ಕೃತಘ್ನನಾದ ಪಕ್ಷದಲ್ಲಿ ನೀವಂದಂತೆಯೇ ನನ್ನ ನಾಶವಾಗಲಿ. ಆ ನಾಶವನ್ನು ನಾನು ನನ್ನ ಕೃತಘ್ನತೆಯ ಯೋಗ್ಯ ಪ್ರಾಯಶ್ಚಿತ್ತವೆಂದು ತಿಳಿಯುವೆನು. ಅದರ ಚಿಂತೆ ಬೇಡ, ನಿಮ್ಮ ವಿಯೋಗದಿಂದ ನಾನು ಈಗಲೇ ನಾಶವನ್ನು ಹೊಂದುತ್ತಿರಲು, ಪ್ರಸಂಗವಶಾತ್ ವಿನಾಶಾಂಕುರವನ್ನು ಹುಟ್ಟಿಸಿಕೊಂಡರೆ ಹಾನಿಯೇನು ? ಮೊದಲು ಊಟವಾಗಲಿ, ನಿಮ್ಮ ಮಾರ್ಜೀನೆಯು ಬರುವತನಕ ಯಾವ ಮಾತೂ ಬೇಡ, ಎಂದು ಹೇಳಿ, ರಾಮರಾಜನು ಹೊರಟುಹೋದನು. ಆತನ ಅಪ್ಪಣೆಯಂತೆ ಒಬ್ಬ ವೃದ್ಧ ದಾಸಿಯು ಆ ತರುಣಿಯನ್ನು ಪರಾಮರ್ಶಿಸಹತ್ತಿದಳು.

****