ಬಂದಿತು. ವಿಜಯನಗರದಲ್ಲಿದ್ದ ವಿಜಾಪುರದ ವಕೀಲನು ಹೊರಟುಹೋದನು. ಇನ್ನು ಮೇಲೆ ಯುದ್ಧವು ನಿಶ್ಚಯವಾಗಿ ಅರಂಭವಾಗುವದೆಂದು ಎಲ್ಲರಿಗೆ ಗೊತ್ತಾಯಿತು; ಆದರೆ ರಾಮರಾಜನು ತನ್ನ ಮತದಿಂದ ಪರಮಾವಧಿಯಾಗಿ ಸೈನ್ಯವನ್ನು ಸಜ್ಜುಗೊಳಿಸಿದ್ದರಿಂದ, ಆತನಿಗೆ ಯಾತರ ಹೆದರಿಕೆಯೂ ಇದ್ದಿಲ್ಲ.
ರಾಮರಾಜನು ಸ್ವಚ್ಛಂದವೃತ್ತಿಯವನು. ಒಮ್ಮೆ ಏನಾದರೂ ಮಾಡಬೇಕೆಂದು ಅವನ ಮನಸ್ಸಿನಲ್ಲಿ ಹೊಕ್ಕರೆ, ಅದನ್ನು ಅವನು ಮಾಡಿಯೇ ತೀರುವನು. ರಣಮಸ್ತಖಾನನು ತನ್ನ ಮಗನೆಂತಲೂ, ಮಾಸಾಹೇಬರು ತನ್ನ ಪ್ರಿಯ ಮೆಹೆರಜಾನಳೆಂತಲೂ, ಲೈಲಿಯು ಆಕೆಯ ದಾಸಿಯೆಂತಲೂ ಆತನ ನಿಶ್ಚಯಿಸಿದ್ದನು, ಧನಮಲ್ಲನು ಆತನ ನಿಶ್ಚಯವನ್ನು ಬಲಪಡಿಸಿದ್ದನು. ಆದ್ದರಿಂದ ತಾನು ಒಮ್ಮೆ ಪ್ರತ್ಯಕ್ಷ ಮೆಹೆರಜಾನಳನ್ನು ಕಂಡು ಆಕೆಯ ಕ್ಷಮೆ ಬೇಡಬೇಕೆಂದು ಒಮ್ಮೆ ರಾತ್ರಿ ಆತನು ಕುಂಜವನಕ್ಕೆ ಹೋದದ್ದನ್ನು ವಾಚಕರು ಬಲ್ಲರು. ಆಗ ಮಾಸಾಹೇಬರು ಪುಷ್ಕರಣಿಯಲ್ಲಿ ಹಾರಿಕೊಂಡನೆಂತಲೂ, ವಾಚಕರು ನೆನಪಿನಲ್ಲಿಟ್ಟುಕೊಂಡಿರಬಹುದು. ಈ ಪ್ರಸಂಗ ಒದಗಿದ ಬಳಿಕ ಕುಂಜವನದಲ್ಲಿ ರಣಮಸ್ತಖಾನನ ಜನರು ಯಾರೂ ಉಳಿದಿದ್ದಿಲ್ಲ. ಒಂದು ರೀತಿಯಿಂದ ಈಗ ಕುಂಜವನವು ಹಾಳುಬಿದ್ದಂತೆ ಆಗಿತ್ತು; ಇತ್ತ ಮೂವರು ಬಾದಶಹರು ವಿಜಯನಗರದ ಮೇಲೆ ಸಾಗಿಬರುತ್ತಿರುವರೆಂಬ ಸುದ್ದಿಗಳು ಬರತೊಡಗಿದ್ದವು. ಈ ಸ್ಥಿತಿಯಲ್ಲಿ ರಾಮರಾಜನು ನಿಶ್ಚಿಂತ ಪುರುಷನಂತೆ ಕುಂಜವನಕ್ಕೆ ಹೋಗಿ, ಅಲ್ಲಿಯ ಕಾವಲುಗಾರರಿಗೆ- “ನೀವು ಕುಂಜವನವನ್ನೂ, ಅಲ್ಲಿಯ ಬಂಗಲೆಯನ್ನೂ, ಪುಷ್ಕರಿಣಿಯನ್ನೂ ಮೊದಲಿನಂತೆ ಇನ್ನು ನಾಲ್ಕು ದಿನಗಳಲ್ಲಿ ಶೃಂಗರಿಸಲಿಕ್ಕೆ ಬೇಕೆಂದು ಆಜ್ಞಾಪಿಸಿದನು. ಸಾವಿರಾರು ಜನರನ್ನು ಬಿಟ್ಟಿಯ ಹಿಡಿದರೂ ಚಿಂತೆಯಿಲ್ಲ. ಕುಂಜವನವು ಮೊದಲಿನಂತೆ ಆಗಲಿಕ್ಕೆ ಬೇಕೆಂತಲೂ ಹಾಗೆ ಆಗದಿದ್ದರೆ ನಿಮಗೆ ಶಾಸನ ವಾದೀತೆಂತಲೂ ನಿಷ್ಟುರವಾಗಿ ಹೇಳಿದನು. ಯುದ್ಧಪ್ರಸಂಗ ಒದಗಿರಲು ರಾಮರಾಜನು ಹೀಗೆ ತೊಟ್ಟಪಟ್ಟಿಗಳ ವ್ಯವಸ್ಥೆ ಮಾಡುವದನ್ನು ನೋಡಿ ಕಾವಲುಗಾರರಿಗೆ ಆಶ್ಚರ್ಯವಾಯಿತು; ಆದರೆ ರಾಮರಾಜನಿಗೆ ವಿರುದ್ಧವಾಗಿ ಯಾರು ಮಾತಾಡಬೇಕು ? ಅವರು ಈ ಕುಂಜವನದಲ್ಲಿಯೇ ಯುದ್ದದ ಒಳಸಂಚುಗಳೇನಾದರೂ ನಡೆಯಬೇಕಾಗಿರಬಹುದು ಎಂದು ತಿಳಿದರು. ಹ್ಯಾಗಿದ್ದರೂ ಅವರು ರಾಮರಾಜನ ಅಪ್ಪಣೆಯಂತೆ ನಡೆಯಲೇಬೇಕಾಗಿತ್ತು. ಅವರು ಹಗಲು ರಾತ್ರಿ ಶ್ರಮಪಟ್ಟು ನಾಲ್ಕು ದಿನಗಳಲ್ಲಿ ಕುಂಜವನವನ್ನು ಶೃಂಗರಿಸಿದರು, ಮೂರನೆಯ ದಿವಸ ಸಂಜೆಗೆ ಮೆಹೆರ್ಜಾನಳೂ