ಈ ಪುಟವನ್ನು ಪ್ರಕಟಿಸಲಾಗಿದೆ

೨೪೪

ಕನ್ನಡಿಗರ ಕರ್ಮಕಥೆ

ಆಗುವಹಾಗಿದ್ದಿಲ್ಲ ; ಆದರೆ ಕರ್ಮಧರ್ಮ ಸಂಯೋಗದಿಂದ ರಾಮರಾಜನೇ ಧನಮಲ್ಲನಿಗೆ ಬಂಗಲೆಯೊಳಗೆ ಹೋಗಲಾಗದೆಂದು ಆಜ್ಞಾಪಿಸಿದ್ದನು. ಮಾಸಾಹೇಬರು ಹೊರಗೆ ಬಾರದಂತೆಯೂ, ಹೊರಗೆ ಬಂದರೂ ಪುಷ್ಕರಣಿಯ ಕಡೆಗೆ ಅವರು ಕಾಲು ಇಡದಂತೆಯೂ, ಪುಷ್ಕರಣಿಯಲಿ ಕಾಲು ಇಟ್ಟರೂ ಅವರು ಪುಷ್ಕರಣಿಯಲ್ಲಿ ಹಾರಿಕೊಳ್ಳದಂತೆಯೂ, ಅವರು ಪುಷ್ಕರಣಿಯಲ್ಲಿ ಹಾರಿಕೊಂಡರೂ ನೀನು ಕೂಡಲೇ ಅವರನ್ನು ಹೊರಗೆ ತೆಗೆದು ನನಗೆ ಸುದ್ದಿಯನ್ನು ಮುಟ್ಟಿಸುವಂತೆಯೂ ವ್ಯವಸ್ಥೆ ಮಾಡಬೇಕೆಂದು ರಾಮರಾಜನು ಧನಮಲ್ಲನಿಗೆ ಹೇಳಿದ್ದನು. ಆದ್ದರಿಂದ ಧನಮಲ್ಲನು ಬಂಗಲೆಯ ಹೊರಗೇ ಅದನ್ನು ಸುತ್ತು ಮುತ್ತು ಕಾಯುತ್ತಲಿದ್ದನು.

ಹೀಗಿರುವಾಗ, ರಾಮರಾಜನು ಬಂದನೆಂಬ ಸುದ್ದಿಯನ್ನು ಒಬ್ಬ ಸೇವಕನು ಮಾಸಾಹೇಬರ ಬಳಿಗೆ ಬಂದು ಹೇಳಿದನು. ಅದನ್ನು ಕೇಳಿದ ಕೂಡಲೆ ಮಾಸಾಹೇಬರ ಹುಬ್ಬುಗಳು ಗಂಟಿಕ್ಕಿದವು. ಅವರ ಸರ್ವಾಂಗವು ಸಂತಪ್ತವಾಯಿತು. ಮುಖವು ಕೆಂಪಾಯಿತು. ತುಟಿಗಳು ಥರಥರ ನಡುಗಹತ್ತಿದವು. ಅವರು ಆ ಸೇವಕನಿಗೆ- “ಹೋಗು, ನೀನು ಹೋಗಿ ಅವರಿಗೆ ಸ್ಪಷ್ಟವಾಗಿ ಹೇಳು. ನಾನು ಪರಪುರಷರ ಮುಖವನ್ನು ನೋಡವದಿಲ್ಲ. ನಾನು ಪರಾಧೀನಳಿರುವೆನೆಂದು ತಿಳಿದು, ಬಲಾತ್ಕಾರದಿಂದ ಅವರು ಒಳಗೆ ಬಂದರೆ. ಅವರ ಪರಿಣಾಮವು ನೆಟ್ಟಗಾಗಲಿಕ್ಕಿಲ್ಲ” ಎಂದು ನುಡಿದು, ಮಾಸಾಹೇಬರು ತಮ್ಮ ಬುರುಕಿಯನ್ನು ಮೈತುಂಬ ಹೊದ್ದುಕೊಂಡರು. ಈ ಪ್ರಸಂಗವನ್ನು ನೋಡಿ ಲೈಲಿಯು ಇನ್ನು ಪರಿಣಾಮವು ನೆಟ್ಟಗಾಗದೆಂದು ಭಾವಿಸಿ, ಒಮ್ಮೆ ಮಾಸಾಹೇಬರನ್ನೂ, ಒಮ್ಮೆ ಸೇವಕನನ್ನೂ ನೋಡುತ್ತ ನಿಂತುಕೊಂಡಳು. ಇತ್ತ ಸೇವಕನು ಇಂಥ ಉದ್ಧಟತನದ ಉತ್ತರವನ್ನು ಮಹಾರಾಜರ ಮುಂದೆ ಹ್ಯಾಗೆ ಹೇಳಬೇಕೆಂದು ಯೋಚಿಸುತ್ತ ಕೆಲವುಹೊತ್ತು ಸುಮ್ಮನೆ ನಿಂತುಕೊಂಡನು, ರಾಮರಾಜನ ಬಳಿಗೆ ಹೋಗಲಿಕ್ಕೆ ಆತನ ಕಾಲುಗಳು ಏಳದಾದವು. ಕಡೆಗೆ ಆತನು ದಾಸಿಯ ಕಡೆಗೆ ಹೊರಳಿ, ಆಕೆಯನ್ನು ಕುರಿತು- “ಮಹಾರಾಜನಿಗೆ ಈ ಮಾತುಗಳನ್ನು ನಾನು ಹ್ಯಾಗೆ ಹೇಳಲಿ ? ಮಹಾರಾಜರನ್ನು ಇಲ್ಲಿಂದ ಹೊರಗೆಹಾಕಲಿಕ್ಕೆ ಯಾರು ಸಮರ್ಥರು ? ನಾನು ಹೋಗಿ ಹೀಗೆ ಇದ್ದಕ್ಕಿದ್ದ ಹಾಗೆ ಹೇಳಿದರೆ ಅವರು ನನ್ನ ತಲೆ ಹಾರಿಸುವದರಲ್ಲಿ ಸಂಶಯವಿಲ್ಲ. ನೀವು ಮೊದಲು ಮಹಾರಾಜರನ್ನು ಒಳಗೆ ಬರಗೊಡಿರಿ. ಆಮೇಲೆ ಏನು ಹೇಳುವದನ್ನು ಅವರ ಮುಂದೆ ಹೇಳಿ ಬಿಡರಿ; ಆದರೆ ಇಂಥ ಭಯಂಕರವಾದ ಉತ್ತರವನ್ನು