೨೪೮
ಕನ್ನಡಿಗರ ಕರ್ಮಕಥೆ
ಆಗ ರಾಮರಾಜನು ಮತ್ತೆ ಲೈಲಿಗೆ- “ಹೂ, ಮಾತಾಡು ರಣಮಸ್ತಖಾನನು ಯಾರು ? ಆತನ ವೃತ್ತಾಂತವನ್ನು ಕೇಳಿಕೊಳ್ಳಲಿಕ್ಕೆ ನಾನು ಅತ್ಯಂತ ಆತುರನಾಗಿದ್ದೇನೆ. ನಾನು ಆತನನ್ನೇ ಕೇಳಬೇಕೆಂದು ಮಾಡಿದ್ದೆನು. “ನೀನು ಎಲ್ಲಿಯವನು ? ನಿನ್ನ ತಾಯಿ-ತಂದೆಗಳು ಯಾರು ? ಅವರು ವಿಜಾಪುರದವರೋ? ಮತ್ತೆ ಎಲ್ಲಿಂದಾದರೂ ವಿಜಾಪುರಕ್ಕೆ ಬಂದವರೋ ?” ಎಂದೇ ಆತನನ್ನು ಕೇಳಿ, ಆತನಿಗೆ ತನ್ನ ಜನ್ಮ ವೃತ್ತಾಂತವು ಗೊತ್ತಿಲ್ಲದ ಪಕ್ಷದಲ್ಲಿ, ನಾನೇ ನಿಜವಾದ ಸಂಗತಿಯನ್ನು ಆತನಿಗೆ ಹೇಳಬೇಕೆಂದು ಮಾಡಿದ್ದೆನು ; ಆದರೆ ಮೊದಲು ಮೆಹೆರ್ಜಾನಳನ್ನು ಕಂಡು ಆಕೆಯಿಂದ ಯಾವತ್ತು ಸಂಗತಿ ಕೇಳಿಕೊಂಡು, ಆಕೆಯ ಮನಸ್ಸಿಗೆ ಬಂದರೆ ಅವನ ಜನ್ಮ ವೃತ್ತಾಂತವನ್ನು ಆತನ ಮುಂದೆ ಹೇಳಬೇಕು. ಇಲ್ಲದಿದ್ದರೆಬಿಡಬೇಕು ಎಂಬ ವಿಚಾರವು ಉತ್ಪನ್ನವಾದ್ದರಿಂದ ಅಷ್ಟಕ್ಕೆ ಬಿಟ್ಟೆನು. ಈಗ ಮೆಹೆರ್ಜಾನಳನ್ನು ಕೇಳುವದಕ್ಕಾಗಿಯೇ ನಾನು ಇಲ್ಲಿಗೆ ಬಂದಿದ್ದೇನೆ. ಅದೇ ಉದ್ದೇಶದಿಂದಲೇ ನಿಮ್ಮನ್ನು ವಿಜಯನಗರದಿಂದ ಇಲ್ಲಿಗೆ ನಿನ್ನೆ ಕಳಿಸಿದೆನು. ನೀವು ಮೊದಲು ಇದ್ದಾಗಿನಂತೆಯೇ ಕುಂಜವನದ ಸ್ಥಿತಿಯು ಈಗ ಆಗಿದೆಯೋ ಇಲ್ಲವೋ ನೋಡಿರಿ. ಇದನ್ನು ನೋಡಿ ನಿಮಗೆ ಹಿಂದಿನದೆಲ್ಲ ನೆನಪಾಗಿ ನನಗೆ ನೀವು ಅನುಕೂಲವಾದೀತೆಂದು ತಿಳಿದು, ಈಗ ನಾಲ್ಕು ದಿವಸಗಳಲ್ಲಿ ಕುಂಜವನವನ್ನು ಬಹು ಶ್ರಮಪಟ್ಟು ವ್ಯವಸ್ಥೆಗೊಳಿಸಿದ್ದೇನೆ. ನಿಮ್ಮ ಮೇಲೆ ನನ್ನ ಪ್ರೇಮವು ಮೊದಲು ಇದ್ದಂತೆ ಈಗಲೂ ಇರುತ್ತದೆ. ನಾನು ಮಹತ್ವಾಕಾಂಕ್ಷೆಯಿಂದ ಕೃಷ್ಣದೇವರಾಯರ ಮಗಳನ್ನು ಲಗ್ನವಾದದ್ದೇನೋ ನಿಜ. ಆದರೆ ರಾಜಕನ್ನೆಯ ಮನಸ್ಸನ್ನು ಒಲಿಸಿಕೊಳ್ಳಲಿಕ್ಕೆ ನಾನು ಎಂದೂ ಯತ್ನಿಸಿರುವದಿಲ್ಲ. ನಿಜವಾದ ಪ್ರೇಮವು ಹುಟ್ಟಿದರೆ ಒಮ್ಮೆಯೇ ಹುಟ್ಟುವದು. ಹುಟ್ಟಿದ ಬಳಿಕ ಅದು ನಾಶಹೊಂದಲಾರದು. ರೂಪಾಂತರಿಸಲಾರದು. ಮಾರ್ಜಿನೇ, ಮಾರ್ಜಿನೇ, ಮೆಹೆರಜಾನಳ ಮೇಲಿದ್ದ ನನ್ನ ಪ್ರೇಮದ ಪರಿವರ್ತನಗಳು (ನಕಲುಗಳು) ಬೇಕಾದಷ್ಟು ಆಗಬಹುದು; ಆದರೆ ಮೆಹೆರಜಾನಳ ಮೇಲಿನ ನನ್ನ ನಿಜವಾದ ಪ್ರೇಮವು ಮೆಹೆರಜಾನಳಲ್ಲಿಯೇ ಉಳಿದಿರುವದು ಅದರ ಮರೆವು ನನಗೆ ಎಂದಿಗೂ ಆಗದು” ಎಂದನು.
ಈ ಮೇರೆಗೆ ನುಡಿಯುವಾಗ ರಾಮರಾಜನ ಕಣ್ಣುಗಳಲ್ಲಿ ನೀರು ಬಂದವು. ಆತನು ಏನೂ ಮಾಡಲಾರದೆ ಸುಮ್ಮನೆ ಕುಳಿತುಕೊಂಡಿದ್ದನು. ಇದನ್ನು ನೋಡಿ ಮಾರ್ಜಿನೆಯ ಮನಸ್ಸು ಕರಗಿತು. ಆಕೆಯು ರಾಮರಾಜನಿಗೆ ಎಲ್ಲ ನಿಜವಾದ ಸಂಗತಿಯನ್ನು ಹೇಳಿ, ಆತನನ್ನು ಸಮಾಧಾನಗೊಳಿಸಬೇಕೆಂದು ಮಾಡಿದಳು.