ಈ ಪುಟವನ್ನು ಪ್ರಕಟಿಸಲಾಗಿದೆ
ಮಾಸಾಹೇಬರ ದುರವಸ್ಥೆ
೨೭೧

ಯೋಗಕ್ಷೇಮವನ್ನೇನೂ ವಿಚಾರಿಸದೆ ಮಾರ್ಜೀನೆಗೆ-ಲೈಲೀ, ನನ್ನನ್ನು ಛಲಿಸುವದರಲ್ಲಿ ಇದಿಷ್ಟು ಕಡಿಮೆಯಾಗಿತ್ತು ; ಆದ್ದರಿಂದ ನನ್ನ ದುರ್ದೈವವು ಈಕೆಯನ್ನು ಇಲ್ಲಿಗೆ ಬರಮಾಡಿತು. ಬಹಳ ನೆಟ್ಟಗಾಯಿತು; ಇನ್ನು ನೀವಿಬ್ಬರೂ ಇಲ್ಲಿಂದ ಹೊರಟುಹೋಗಿರಿ. ಈಕೆಯನ್ನು ಎರಡನೆಯದೊಂದು ಕೋಣೆಯಲ್ಲಿ ಇಡು, ನನ್ನಬಳಿಯಲ್ಲಿ ಬೇಡ. ನನ್ನ ಜಪಕ್ಕೆ ಸುಮ್ಮನೆ ವಿಘ್ನ ಮಾಡಬೇಡ, ಎಂದು ಹೇಳಿ ನೂರಜಹಾನಳ ಕಡೆಗೆ ಬೆನ್ನುಮಾಡಿ ಕುಳಿತುಕೊಂಡಳು.

ತನ್ನ ಒಡೆಯಳ ಸ್ವಭಾವವನ್ನು ಮಾರ್ಜೀನೆಯು ಪೂರ್ಣ ಬಲ್ಲವಳಾಗಿದ್ದಳು; ಆದ್ದರಿಂದ ಆಕೆಯು ಎರಡನೆಯ ಮಾತಾಡದೆ ನೂರಜಹಾನಳನ್ನು ಕರಕೊಂಡು ಬೇರೊಂದು ಕೋಣೆಗೆ ಹೋದಳು. ಹೀಗೆ ಮಾಡುವದು ಮಾರ್ಜೀನೆಗೆ ಯೋಗ್ಯವಾಗಿ ತೋರಲಿಲ್ಲ; ಆದರೆ ಮೆಹೆರ್ಜಾನಳ ದುರವಸ್ಥೆಯನ್ನು ಅರಿತ ಆ ಪ್ರೆಮಲ ಸ್ವಭಾವದ ವೃದ್ದದಾಸಿಯು, ಆಕೆಯ ಮನಸ್ಸಿನ ವಿರುದ್ಧವಾಗಿ ನಡೆಯಲಾರದೆ ನೂರಜಹಾನಳನ್ನು ಬೇರೊಂದು ಕೋಣೆಗೆ ಕರಕೊಂಡು ಹೋದಳು. ನೂರಜಹಾನಳೂ ಅತ್ಯಂತ ಅಭಿಮಾನದ ಸ್ವಭಾವದವಳಿದ್ದಳು ಆಕೆಗೆ ಮಾಸಾಹೇಬರ ಈ ರೀತಿಯು ಸರಿಬೀಳಲಿಲ್ಲ. ಮಾಸಾಹೇಬರು ನೂರಜಹಾನಳ ಕಡೆಗೆ ಬೆನ್ನುಮಾಡಿ ಕುಳಿತುಕೊಳ್ಳುವದರೊಳಗೆ ನೂರಜಹಾನಳು ಹೊರಗೆ ಹೋಗುವದಕ್ಕಾಗಿ ಬಾಗಿಲ ಕಡೆಗೆ ತಿರುಗಿದ್ದಳು. ತಮ್ಮ ಸರ್ವಸ್ವದ ನಾಶಕ್ಕೆ ನೂರಜಹಾನಳೇ ಕಾರಣಳೆಂಬ ಸಿಟ್ಟು, ಮೆಹೆರ್ಜಾನಳಂತೆ ಮಾರ್ಜೀನೆಯ ಮನಸ್ಸಿನಲ್ಲಿಯೂ ಇತ್ತು ; ಆದ್ದರಿಂದ ಆಕೆಯು ನೂರಜಹಾನಳನ್ನು ಕುರಿತು ಅವ್ವಾ, ಈವರೆಗೆ ನಮ್ಮ ಸರ್ವಸ್ವದ ನಾಶಮಾಡಿ, ಇಂಥ ವಿಪತ್ಕಾಲದಲ್ಲಿ ಮತ್ತೆ ನಮ್ಮ ಡಂಕು ತೀರಿಸಿಕೊಳ್ಳುವದಕ್ಕೆ ಯಾಕೆ ಬಂದೆಯೆಂದು ಕೇಳಲು, ನೂರಹಜಾನಳು ವಕ್ರದೃಷ್ಟಿಯಿಂದ ಮಾರ್ಜೀನೆಯನ್ನು ನೋಡುತ್ತ ತಟ್ಟನೆ ಆಕೆಗೆ ನೀವಿಬ್ಬರೂ ಇಲ್ಲಿ ಇರುತ್ತೀರೆಂಬುದು ನನ್ನ ಪಾದರಕ್ಷೆಗೆ ಕೂಡ ಗೊತ್ತಿದ್ದಿಲ್ಲ. ಆ ದುಷ್ಟ ರಾಮರಾಜನು ಕಳಿಸಿಕೊಟ್ಟಿದ್ದರಿಂದ ನಾನು ಪರಾಧೀನಳಾಗಿ ಇಲ್ಲಿಗೆ ಬಂದೆನು, ಎಂದು ಉತ್ತರವನ್ನು ಕೊಟ್ಟಳು. ಇಂತ ದುರುತ್ತರವನ್ನು ಕೊಡಲಿಕ್ಕೆ ನೂರಜಹಾನಳಿಗೆ ಅಂಥ ಕಾರಣವೇನೂ ಇದ್ದಿಲ್ಲ; ಆದರೆ ಮೆಹೆರ್ಜಾನಳ ನಡತೆಯನ್ನು ನೋಡಿದ್ದರಿಂದಲೂ, ಮಾರ್ಜೀನೆಯ ಮಾತುಗಳನ್ನು ಕೇಳಿದ್ದರಿಂದಲೂ, ಸಂತಾಪಸ್ವಭಾವದ ಆ ತರುಣಿಯ ಮುಖದಿಂದ ಸಿಟ್ಟಿನ ಭರದಲ್ಲಿ ಅಂಥ ದುರುತ್ತರವು ತಾನೇ ಹೊರಟುಹೋಯಿತು. ಈ ದುರುತ್ತರವನ್ನು ಕೇಳಿದ ಕೂಡಲೇ ಮಾರ್ಜೀನೆಯಾದರೂ ಅಲ್ಲಿ ನಿಲ್ಲದೆ ಸಂತಾಪದಿಂದ