ಈ ಪುಟವನ್ನು ಪ್ರಕಟಿಸಲಾಗಿದೆ
೨೭೮
ಕನ್ನಡಿಗರ ಕರ್ಮಕಥೆ

ದುಷ್ಟನಿಗೆ ದೊಡ್ಡ ದೊಡ್ಡ ಉಚಿತಗಳ ಆಸೆಯನ್ನು ತೋರಿಸಹತ್ತಿದಳು. ಇದರಿಂದ ಧನಮಲ್ಲನ ವೃತ್ತಿ ಹೆಚ್ಚುಕಡಿಮೆಯಾಯಿತು. ಆತನು ತನ್ನ ಮೌನವನ್ನು ಬಿಟ್ಟುಕೊಟ್ಟಿದ್ದನು. ಯುಕ್ತಿಯಿಂದ ಯುದ್ದದ ವಾರ್ತೆಗಳನ್ನು ಕೇಳಿ, ಅವನ್ನೆಲ್ಲ ಮೆಹೆರ್ಜಾನ-ನೂರಜಹಾನರಿಗೆ ಹೇಳುತ್ತಲಿದ್ದನು; ಆದರೆ ಆತನು ತನ್ನ ಸರ್ಪಗಾವಲು ಮಾತ್ರ ಸಡಿಲಿಸಿದ್ದಿಲ್ಲ. ಇವರು ಕಣ್ಣುತಪ್ಪಿಸಿ ಓಡಿ ಹೋಗುವ ಹವಣಿಕೆಯಲ್ಲಿದ್ದಾರೆಂದು ಆತನು ತಿಳಿದುಕೊಂಡಿದ್ದನು. ನೂರಜಹಾನಳು ಹೋದರೂ ಚಿಂತೆಯಿಲ್ಲ, ಮಾಸಾಹೇಬರು (ಮೆಹೆರ್ಜಾನಳು) ಮಾತ್ರ ಹೋಗಬಾರದೆಂದು ಆತನು ಜಾಗರೂಕನಾಗಿದ್ದನು. ಆತನು ಆ ಸ್ತ್ರೀಯರಿಗೆ “ನಾನು ನಿಮ್ಮ ಬಿಡುಗಡೆಯನ್ನು ನಿಶ್ಚಯವಾಗಿ ಮಾಡುತ್ತೇನೆ. ನನ್ನ ಕಾವಲು ಇರುವತನಕ ನಿಮ್ಮ ಕೂದಲು ಕೂಡ ಕೊಂಕಲಾರದು. ನಿಮ್ಮ ಬಿಡುಗಡೆ ಮಾಡಲಿಕ್ಕೆ ಯೋಗ್ಯ ಸಂಧಿಯು ಮಾತ್ರ ಒದಗಲಿಕ್ಕೆ ಬೇಕು. ಆ ಸಂಧಿಯು ಒದಗುವವರೆಗೆ ಸಮಾಧಾನ ತಾಳಿರಿ” ಎಂದು ಹೇಳುತ್ತಲಿದ್ದನು. ನಿರುಪಾಯರಾಗಿ ಆ ದೈವಹೀನ ಪ್ರಾಣಿಗಳು ಕಷ್ಟದಿಂದ ಕಾಲಹರಣ ಮಾಡಹತ್ತಿದರು.

****