ಈ ಪುಟವನ್ನು ಪ್ರಕಟಿಸಲಾಗಿದೆ

೨೯೦
ಕನ್ನಡಿಗರ ಕರ್ಮಕಥೆ

ಮನಸ್ಸಿನಲ್ಲಿ ಬಹಳವಾಗಿ ಹಿಗ್ಗಿದನು. ಇಂಥ ಪ್ರಚಂಡ ಸೈನ್ಯದ ಮುಂದೆ ಶತ್ರುಗಳ ಆಟವೇನು ನಡೆಯದಾದ್ದರಿಂದ ಅವರನ್ನು ಸಹಜವಾಗಿ ದಿಕ್ಕುಗೆಡಿಸಿ ಓಡಿಸಬಹುದೆಂದು ಆ ರಾಯನು ಭಾವಿಸಿ ಆನಂದಭರಿತನಾದನು. ಆತನು ಸೈನ್ಯದ ಪ್ರತಿ ಒಂದು ತುಂಡಿನ ಮುಖ್ಯಸ್ಥನೊಡನೆ ಸ್ವಲ್ಪ ಸ್ವಲ್ಪ ಮಾತಾಡುತ್ತ, ಉತ್ತೇಜಕ ಭಾಷಣದಿಂದ ಅವರನ್ನು ಪ್ರೋತ್ಸಾಹಿಸುತ್ತ ಮುಂದಕ್ಕೆ ಸಾಗುತ್ತಲಿದ್ದನು. ರಾಮರಾಜನ ಸೈನದವರಿಗೆಲ್ಲ ಅಲ್ಪ ಸ್ವಲ್ಪ ಧನುರ್ವಿದ್ಯೆಯ ಜ್ಞಾನವಿರುತ್ತಿದ್ದರೂ, ಕೇವಲ ಧನುರ್ವಿದ್ಯೆಯಲ್ಲಿ ಪ್ರವೀಣವಾದದ್ದೊಂದು ಸ್ವತಂತ್ರ ಸೈನ್ಯವನ್ನು ರಾಯನು ಸಿದ್ಧಮಾಡಿದ್ದನು. ಆ ಸೈನ್ಯದ ಯುದ್ಧ ಪ್ರಾವೀಣ್ಯವು ಶ್ಲಾಘನೀಯವಾಗಿತ್ತು. ಅದರಂತೆ ರಾಮರಾಜನ ಸೈನ್ಯದಲ್ಲಿ ತೋಫಖಾನೆಯೂ, ತುಬಾಕಿಗಳನ್ನು ಹಾರಿಸುವವರದೊಂದು ಸೈನ್ಯವೂ ಇದ್ದವು. ಹಿಂದೂ ಸೈನಿಕರಲ್ಲದೆ ಪಠಾಣ ಹಾಗೂ ಅರಬರ ಒಂದೊಂದು ಸೈನ್ಯಗಳು ರಾಮರಾಜನ ದಂಡಿನಲ್ಲಿ ಇದ್ದವು. ಇವೆರಡೂ ದಂಡುಗಳ ಅಧಿಪತಿಯು ರಣಮಸ್ತಖಾನನಾಗಿದ್ದನು. ಯಾವತ್ತು ಸೇನಾಸಮುದ್ರವನ್ನು ನೋಡುತ್ತನೋಡುತ್ತ ರಾಮರಾಜನ ಸವಾರಿಯು ರಣಮಸ್ತಖಾನನ ಸೈನ್ಯದ ಬಳಿಗೆ ಬಂದಿತು. ರಣಮಸ್ತಖಾನನ ಈಗಿನ ಉಡುಪು ತೊಡಪುಗಳು ಬೇರೆತರವಾಗಿದ್ದವು. ಯುದ್ದವೇಷದಿಂದ ಆ ತರುಣ ಸರದಾರನ ಸೌಂದರ್ಯವು ತುಂಬಿ ಹೊರಸೂಸುತ್ತಲಿತ್ತು. ಆತನನ್ನು ನೋಡಿ ರಾಮರಾಜನು ಬಹು ಕೌತುಕಪಟ್ಟನು. ರಣಮಸ್ತಖಾನನ ಆ ಎರಡೂ ಪಲಪಟಣಗಳಲ್ಲಿ ಮುಸಲ್ಮಾನ ಸೈನ್ಯದಲ್ಲಿ ತುರ್ಕರು, ಸಿದ್ದಿಗಳು, ಅರಬರು, ಕಾಬೂಲದ ಪಠಾಣರು ಇದ್ದರು. ಅವರವರ ಬೇರೆಬೇರೆ ಪ್ರಕಾರದ ಪೋಷಾಕುಗಳನ್ನು ನೋಡುವಾಗ ಪ್ರೇಕ್ಷಕರ ಮನೋರಂಜನವಾಗುತ್ತಿತ್ತು. ಅವರಲ್ಲಿ ಪಠಾಣರ ಭವ್ಯ ದೇಹಗಳೂ, ಎತ್ತರವಾದ ಅರಬರ ಆದರೆ ತೆಳ್ಳಗಿನ ದೇಹಗಳೂ, ಸಿದ್ದಿ ಜನರ ಗಿಡ್ಡಾದಕಪ್ಪು ದೇಹಗಳೂ ಬಹುವಿಚಿತ್ರವಾಗಿ ತೋರುತ್ತಿದ್ದವು. ಈ ಯಾವತ್ತು ಮುಸಲ್ಮಾನ ಸೈನಿಕರು ಕೇವಲ ದುಡ್ಡಿನ ಸಲುವಾಗಿ ರಾಮರಾಜನ ಪಕ್ಷದಿಂದ ಕಾಣುತ್ತ, ಆತನ ಆಜ್ಞೆಯಂತೆ ನಡಕೊಳ್ಳುತ್ತಿದ್ದರು. ರಾಮರಾಜನು ಆ ಮುಸಲ್ಮಾನ ಸೈನ್ಯವನ್ನು ನೋಡಿ ರಣಮಸ್ತಖಾನನೊಡನೆ ನಾಲ್ಕು ಮಾತುಗಳನ್ನಾಡಿ, ಆ ದುಷ್ಟ ಖಾನನ ಮುಖಾಂತರ ಆತನ ಸೈನಿಕರನ್ನು ಕುರಿತು ನಾಲ್ಕು ಉತ್ತೇಜನಪರ ಮಾತುಗಳನ್ನಾಡಿಸಿ, ರಣಮಸ್ತಖಾನನೊಡನೆ ತನ್ನ ಶಿಬಿರದ ಕಡೆಗೆ ಸಾಗಿದನು.

ಯಾವತ್ತು ಸೈನ್ಯದ ಅವಲೋಕನದಿಂದ ರಾಮರಾಜನ ಉತ್ಸಾಹವು ಅಭಿವೃದ್ಧವಾಗಿತ್ತು. ಶತ್ರುಗಳು ಈಗ ಮೈಮೇಲೆ ಏರಿಬಂದರೆ, ಯಾವ