೩೩ನೆಯ ಪ್ರಕರಣ
ದಂಪತಿಗಳ ಅಂತ್ಯವು
ಈ ಮೇರೆಗೆ ನಿಜಾಮಶಹನ ಆನೆಯು ತಮ್ಮ ಒಡೆಯನ ಪಲ್ಲಕ್ಕಿಯನ್ನು ಬೆನ್ನಟ್ಟಿರಲು, ರಾಮರಾಜನ ಜನರು ರಾಮರಾಜನ್ನನು ಪಲ್ಲಕ್ಕಿಯಿಂದ ಇಳಿಸಿ ರಥದಲ್ಲಿ ಕುಳ್ಳಿರಿಸಿಕೊಂಡು ವೇಗದಿಂದ ಸಾಗಿದರು. ಹೀಗೆ ರಾಮರಾಜನು ಓಡಿಹೋಗುವದನ್ನು ನೋಡಿ ಆತನ ಸೈನಿಕರೂ ಓಡಿಹೋಗುವ ಮನಸ್ಸು ಮಾಡಿದರು. ಈ ದುರ್ಬುದ್ದಿಯು ಸೈನಿಕರಿಗೆ ಉತ್ಪನ್ನವಾಗುವದೊಂದೇ ತಡ, ವಿಜಯನಗರದ ದಂಡಾಳುಗಳು ವಿಜಯನಗರದ ಕಡೆಗೆ ಓಡಹತ್ತಿದರು. ಅಂದಬಳಿಕ ಕೇಳುವದೇನು, ಮುಸಲ್ಮಾನ ಸೈನಿಕರು ಹಿಂದುಗಳನ್ನು ಬೆನ್ನಟ್ಟಿ ಸಂಹರಿಸಹತ್ತಿದರು. ಅಕಸ್ಮಾತ್ತಾಗಿ ಹೀಗೆ ಯಾಕಾಯಿತೆಂಬುದು ಯಾರಿಗೂ ತಿಳಿಯಲೊಲ್ಲದು. ವಿಜಯನಗರದ ಸೈನಿಕರು ಅಶ್ಚರ್ಯಚಕಿತರಾದರು; ಆದರೆ ಓಡಿಹೋಗುವದರ ಹೊರತು ಬೇರೆ ವಿಚಾರವೇ ಅವರಿಗೆ ಹೊಳೆಯಲಿಲ್ಲವು. ಹೀಗೆ ಒಂದು ಒಂದೂವರೆ ತಾಸಿನವರೆಗ ಓಡುವ ಕೆಲಸವು ನಡೆಯಿತು. ಅಷ್ಟರಲ್ಲಿ ಹಿಂದೂ ದಂಡಾಳುಗಳಿಗೆ ಅಕಸ್ಮಾತ್ತಾಗಿ ಮತ್ತೊಂದು ಗಂಡಾತರವು ಒದಗಿತು. ವಿಶ್ವಾಸಘಾತಕಿಯಾದ ರಣಮಸ್ತಖಾನನು ತನ್ನ ಅರಬ-ಪಠಾಣ ಸೈನ್ಯವನ್ನು ಓಡಿಬರುವ ಹಿಂದುಗಳ ಸೈನ್ಯದ ಮೇಲೆ ನೂಕಿದನು. ಹಿಂದೆ ಮುಸಲ್ಮಾನ ಬಾದಶಹರ ಸೈನ್ಯ, ಮುಂದೆ ರಣಮಸ್ತಖಾನನ ಸೈನ್ಯ ಹೀಗೆ ಅಡಕೊತ್ತಿನಲ್ಲಿ ಸಿಕ್ಕ ಅಡಿಕೆಯಂತೆ ಹಿಂದೂ ಸೈನಿಕರು ಹೆಜ್ಜೆಯಾಗಹತ್ತಿದರು. ಅವರಿಗೆ ಹಿಂದಿರುಗಿ ಕಾದಲಿಕ್ಕೆ ಬರಲೊಲ್ಲದು; ಮುಂದಕ್ಕೆ ಓಡಿಹೋಗಲಿಕ್ಕೂ ಬರಲೊಲ್ಲದು. ಹೀಗಾಗಿ ಭಯಂಕರವಾದ ಹತ್ಯೆ ಆರಂಭವಾಯಿತು. ಹಿಂದೂ ಸೈನಿಕರ ಹೆಣಗಳ ರಾಶಿಗಳು ಬಿದ್ದವು. ಸಾವಿರಾರು ಆನೆಗಳು-ಕುದುರೆಗಳು ದಿಂಡುರುಳಿದವು. ಇಂಥ ಪ್ರಸಂಗದಲ್ಲಿ ರಾಮರಾಜನ ಮುನ್ನೂರು ಜನ ಸ್ವಾಮಿ ಭಕ್ತ ದಂಡಾಳುಗಳು ತಮ್ಮ ಒಡೆಯನನ್ನಾದರೂ ಮುದಗಲ್ಲ ಕೋಟೆಯವರೆಗೆ ಸುರಕ್ಷಿತವಾಗಿ ಕರಕೊಂಡು ಹೋಗಬೇಕೆಂದು ನಿಶ್ಚಯಿಸಿ. ರಾಮರಾಜನ ರಥವನ್ನು ದಕ್ಷತೆಯಿಂದ ರಕ್ಷಿಸುತ್ತ ಅದನ್ನು ಭರದಿಂದ ಸಾಗಿಸಿಕೊಂಡು ಹೋಗುತ್ತಲಿದ್ದರು. ಆದರೆ ಭವಿತವ್ಯವನ್ನು