ಆಕೆಯು ತಟ್ಟನೆ ಹಿಂದಕ್ಕೆ ಸರಿದು, ಗಾಬರಿಯಾಗಿ ರಣಮಸ್ತನನ್ನು ಕುರಿತು ಇದೇನು ನಿಮ್ಮ ತಂದೆಯ ಶಿರಚ್ಛೇದ ಮಾಡಿದ ಕೈಯಿಂದಲೇ ನೀವು ನನ್ನ ಕೈ ಹಿಡಿಯುವಿರೇನು ? ನಿಮ್ಮ ಪ್ರೇಮಲಸ್ವಭಾವದ ಮಾತೃಶ್ರೀಯು ತನ್ನ ಪತಿಯ ಶಿರಸ್ಸಿನೊಡನೆ ಇದೇ ಈಗ ಜಲಸಮಾಧಿಯನ್ನು ಹೊಂದಿರಲು, ಅದನ್ನೆಲ್ಲ ಮರೆತು, ಇದೇ ಕ್ಷಣದಲ್ಲಿ ಇಂಥ ಮಾತುಗಳನ್ನು ಆಡುವಿರಾ ? ನೋಡಿರಿ, ನಿಮ್ಮ ವೃದ್ದದಾಸಿಯಾದ ಲೈಲಿಯು ಇತ್ತಕಡೆಗೆ ಬರುತ್ತಾಳೆ, ಅನ್ನಲು ರಣಮಸ್ತನು ಮಾರ್ಜೀನೆಯ ಕಡೆಗೆ ನೋಡಿ, ಆಕೆಯ ಕೈಯನ್ನು ಹಿಡಿದು ಆಕೆಯನ್ನು ದರದರ ಎಳೆಯುತ್ತ ತಂದು-ಲೈಲೀ, ಹಿಂದಕ್ಕೆ ನೀನು ನನ್ನ ಜನ್ಮವೃತ್ತಾಂತವನ್ನು ಗೂಢವಿಟ್ಟು ಹೇಳಿದೆಯಲ್ಲ, ಈಗ ಅದನ್ನು ಸ್ಪಷ್ಟವಾಗಿ ಹೇಳು, ಇಲ್ಲದಿದ್ದರೆ ಮಾಸಾಹೇಬರನ್ನು ಹಿಂಬಾಲಿಸಿ ಹೋಗುವಂತೆ ನಿನ್ನ ಕುತ್ತಿಗೆ ಹಿಚಿಕಿ ಈ ಪುಷ್ಕರಣಿಯಲ್ಲಿ ಹಾಕುವೆನು ಎಂದನು.
ಮಾಸಾಹೇಬರು ಪುಷ್ಕರಣೆಯಲ್ಲಿ ಹಾರಿಕೊಂಡದ್ದನ್ನು ಮಾರ್ಜೀನೆಯು ದೂರದಿಂದ ನೋಡಿದ್ದಳಾದ್ದರಿಂದ, ಆಕೆಗೆ ತನ್ನ ಜೀವವು ಬೇಡಾಗಿತ್ತು. ರಣಮಸ್ತನು ತನ್ನನ್ನು ನೋಡಿ ಕೈಹಿಡಿಯದಿದ್ದರೆ ಆಕೆಯು ಇಷ್ಟು ಹೊತ್ತಿಗೆ ಪುಷ್ಕರಣಿಯಲ್ಲಿ ಹಾರಿಕೊಂಡುಬಿಡುತ್ತಿದ್ದಳು. ನಿರಿಚ್ಛಳಾದ ಆಕೆಯು ಈಗ ರಣಮಸ್ತನ ಆಗ್ರಹದ ಪ್ರಶ್ನಕ್ಕೆ ಉತ್ತರವನ್ನು ಹೇಳಿಬಿಡಬೇಕೆಂದು ನಿಶ್ಚಯಿಸಿ, ರಣಮಸ್ತನ ಜನ್ಮವೃತ್ತಾಂತವನ್ನು ಸಾದ್ಯಂತವಾಗಿ ಅವನಿಗೆ ಹೇಳಿದಳು. ಇದನ್ನು ಕೇಳುತ್ತಿರುವಾಗ ರಣಮಸ್ತನ, ಹಾಗು ನೂರಜಹಾನಳ ಚಿತ್ತ ವೃತ್ತಿಗಳು ಹ್ಯಾಗಾಗಿರಬಹುದೆಂಬದನ್ನು ವರ್ಣಿಸುವದು ಸಾಧ್ಯವಿಲ್ಲ. ಪ್ರತ್ಯಕ್ಷತಂದೆಯು ನನ್ನನ್ನು ಅಕೃತ್ರಿಮ ರೀತಿಯಿಂದ ಪ್ರೀತಿಸುತ್ತಿರಲು, ನಾನು ಈ ಕೈಯಿಂದ ಆತನ ಶಿರಚ್ಛೇದ ಮಾಡಿ ಮಹಾಪಾತಕಕ್ಕೆ ಗುರಿಯಾದೆನಲ್ಲ ! ಎಂದು ವಿಚಾರ ಮಾಡುತ್ತ ರಣಮಸ್ತನು ಸುಮ್ಮನೆ ಕುಳಿತುಬಿಟ್ಟನು. ಇತ್ತ ನೂರಜಹಾನಳು ರಣಮಸ್ತಖಾನನ ಕುಲವೃತ್ತಾಂತವನ್ನು ಕೇಳಿ, ಅವನನ್ನು ಬಹಳವಾಗಿ ತಿರಸ್ಕರಿಸಹತ್ತಿ, ತಾನು ಇನ್ನು ಈತನ ಬಳಿಯಲ್ಲಿಂದ ಹ್ಯಾಗೆ ಪಾರಾಗಿಹೋಗಬೇಕೆಂದು ಯೋಚಿಸುತ್ತ ಸುಮ್ಮನೆ ಕುಳಿತುಕೊಂಡಳು. ಹೀಗೆ ಇವರಿಬ್ಬರು ವಿಚಾರಮಗ್ನರಾಗಿರಲು ಮಾರ್ಜೀನೆಯು ಈ ಸಂಧಿಯನ್ನು ಸಾಧಿಸಿ ಪುಷ್ಕರಣಿಯಲ್ಲಿ ಹಾರಿಕೊಂಡಳು. ಆಕೆಯು ಹಾರಿಕೊಂಡ ಸಪ್ಪಳಕ್ಕೆ ರಣಮಸ್ತನು ಎಚ್ಚತ್ತು ನೂರಜಹಾನಳ ಕೈಯನ್ನು ಕಸುವಿನಿಂದ ಹಿಡಿದನು. ಈ ಕಾಲದಲ್ಲಿ ರಣಮಸ್ತನು ಉನ್ಮತ್ತನಾಗಿದ್ದನು. ಆತನ ಮೈಮೇಲೆ ಪೂರಾ ಎಚ್ಚರವು ಇದ್ದಿಲ್ಲ. ಆತನು ನೂರಜಹಾನಳನ್ನು ಕುರಿತು-ನಿನ್ನ ಸಲುವಾಗಿ ನಾನು