ಈ ಪುಟವನ್ನು ಪ್ರಕಟಿಸಲಾಗಿದೆ

ಎಲ ! ಇದೇನು?
೧೯

ಅತ್ಯಂತ ನಿಗ್ರಹದಿಂದ ಆಚರಿಸತಕ್ಕದ್ದು ಇರಲಿ. ರಾಮರಾಜನು ಹಾಗೆ ನಿಗ್ರಹದಿಂದ ನಡೆಯದೆ, ಮನಸ್ಸನ್ನು ಹರಿಬಿಟ್ಟಿದ್ದರಿಂದ ಎಂಥ ಘನವಾದ ಸಾಮ್ರಾಜ್ಯದ ಲಯಕ್ಕೆ ಕಾರಣನಾದನೆಂಬುದನ್ನು ಈ ಕಾದಂಬರಿಯಲ್ಲಿ ಬರೆಯುವ ದುಃಖದ ಪ್ರಸಂಗವು ನಮಗೊದಿಗಿದೆ ! ರಾಮರಾಜನ ಎಟ್ಟಿಮನಸ್ಸು ಮಾರ್ಜೀನೆಯ ಸದ್ಬೋಧಕೆ ಬಗ್ಗಲಿಲ್ಲ; ಪಾಪ ಪುಣ್ಯದ ವಿಚಾರವನ್ನು ಲೆಕ್ಕಿಸಲಿಲ್ಲ. "ವಿನಾಶಕಾಲೇ ವಿಪರೀತ ಬುದ್ಧಿ:" ಎಂಬಂತೆ ಆ ತರುಣ ಸರದಾರನು ಮಾರ್ಜೀನೆಯನ್ನು ಕುರಿತು ಉದ್ಧಾಮತನದಿಂದ-”ಮಾರ್ಜೀನೆ, ಇಷ್ಟೊಂದು ಪಾಂಡಿತ್ಯವನ್ನು ತೋರಿಸುವದಕ್ಕಾಗಿ ತಾನು ನಿನ್ನನ್ನು ಕರೆಸಲಿಲ್ಲ. ನೀನೂ ನಿಮ್ಮ ಮೆಹರ್ಜಾನಳೂ ಈಗ ನನ್ನ ಕೈಯಲ್ಲಿ ಸಿಕ್ಕಿರುತ್ತೀರೆಂಬುದನ್ನು ಚೆನ್ನಾಗಿ ನೆನಪಿನಲ್ಲಿಡು. ಮುಯ್ಯಕ್ಕೆ ಮುಯ್ಯವೆಂಬಂತೆ ಮುಸಲ್ಮಾನರ ದುರಾಚಾರದ ಸೇಡು ತೀರಿಸಿಕೊಳ್ಳುವದಕ್ಕಾಗಿ, ನಾನು ಮೆಹರ್ಜಾನಳನ್ನು ನನ್ನ ಮನಸ್ಸಿಗೆ ಬಂದಂತೆ ನಡೆಸಿಕೊಳ್ಳುವವನೇ ಸರಿ; ಮೆಹರ್ಜಾನಳು ನನ್ನ ಮಾತಿಗೆ ಅರ್ಧ ಸಮ್ಮತಿಯನ್ನು ಕೊಟ್ಟಂತಾಗಿರುತ್ತದೆ. ಹೀಗಿರಲು ನೀನು ನಡುವೆ ಕಲ್ಲು ಹಾಕಿದರೆ ನಿಮ್ಮ ಪರಿಣಾಮನೆಟ್ಟಗಾಗಲಿಕ್ಕಿಲ್ಲ. ನನ್ನ ಕಾರ್ಯಕ್ಕೆ ಅನುಕೂಲವಾಗುವ ಮನಸ್ಸು ನಿನಗಿಲ್ಲದಿದ್ದರೆ ನೀನು ಸುಮ್ಮನಾದರೂ ಇರು, ನನ್ನನ್ನು ಬೋಧಿಸಿದಂತೆ ಮೆಹರ್ಜಾನಳನ್ನು ಬೋಧಿಸುವ ಗೊಡವಿಗೆ ಹೋಗಬೇಡ. ಮಾರ್ಜೀನೇ, ತಿಳಿದು ನೋಡು ನಿನ್ನ ಬೋಧವು ನಮ್ಮಂಥ ತರುಣರಿಗೆ ತಕ್ಕದ್ದೇ ? "ಸೂಳೆ ಮುಪ್ಪಾಗಿ ಜೋಗತಿಯಾದಳೆಂಬಂತೆ" ನಿಮ್ಮಂಥ ದಿನ ಹೋದ ಹೆಂಗಸರಿಗೆ ಪ್ರಸಂಗವಶಾತ್ ನಮ್ಮಂಥ ತರುಣರ ಮುಂದೆ ಇಲ್ಲದ ಪಾಂಡಿತ್ಯವನ್ನು ತೋರಿಸಲಿಕ್ಕೆ ಈ ಬೋಧವು ತಕ್ಕದಾಗಿರುತ್ತದೆ!! ನೀನು ಬೋಧಿಸಿದಂತೆ ನಮ್ಮ ಮೆಹರ್ಜಾನಳು ನನ್ನನ್ನು ಬೋಧಿಸಿದ್ದರೆ ನಾನು ಒಪ್ಪುತ್ತಿದ್ದೆನು. ಆಕೆಯು ನಾನು ಕೇಳಿದ್ದಕ್ಕೆ ಸುಮ್ಮನಿದ್ದು ಅರ್ಧ ಸಮ್ಮತಿಯನ್ನು ತೋರಿಸಿರುತ್ತಾಳೆ. ಬಹಳ ಮಾತುಗಳೇನು ? ನಾನಿದ್ದೇನೆ, ಮೆಹರ್ಜಾನಳಿದ್ದಾಳೆ. ಆ ಸುಂದರಿಯು ಒಪ್ಪಿಕೊಂಡರೇ ನಾನು ಆಕೆಯ ಪಾಣಿಗ್ರಹಣ ಮಾಡಿ, ಅವಳನ್ನು ನನ್ನ ಪ್ರಾಣೇಶ್ವರಿಯನ್ನಾಗಿ ಮಾಡಿಕೊಳ್ಳುವೆನು. ಆಮೇಲೆ ನನ್ನನ್ನು ಹೀಗೆ ಬೋಧಿಸಿದ ಬಗ್ಗೆ ನಿನಗೇ ಪಶ್ಚಾತ್ತಾಪವಾದೀತು. ಹೋಗು. ನನ್ನ ಸಿಟ್ಟಿನ ಮಾತುಗಳನ್ನು ಮನಸಿಗೆ ಹಚ್ಚಿಕೊಳ್ಳದೆ, ಮೆಹರ್ಜಾನಳು ನನಗೆ ಅನುಕೂಲಳಾಗುವಂತೆ ಮಾಡು, ಎಂದು ಹೇಳಿ, ರಾಮರಾಜನು ಮಾರ್ಜೀನೆಯನ್ನು ಮನೆಗೆ ಕಳಿಸಿಬಿಟ್ಟನು.