ಈ ಪುಟವನ್ನು ಪ್ರಕಟಿಸಲಾಗಿದೆ

ಎಲ ! ಇದೇನು?
೨೧

ಇದೇ ಕಾರಣವು. ಏರಿಕೆಯ ರಕ್ತದ ತರುಣರ ಸ್ಥಿತಿಯು ಹೀಗೆಯೇ ಸರಿ. ಅವರಿಗೆ ಪ್ರಯತ್ನದ ಫಲವು ಮಾತ್ರ ಕಣ್ಣಿಗೆ ಕಟ್ಟುತ್ತದಲ್ಲದೆ, ಪ್ರಯತ್ನದಲ್ಲಿಯ ತೊಂದರೆಗಳು ಕಾಣುವುದಿಲ್ಲ. ಈ ನಿಯಮಕ್ಕನುಸರಿಸಿ ಮೆಹರ್ಜಾನಳು ರಾಮರಾಜನ ಇಚ್ಛೆಯಂತೆ ನಡೆದುಕೊಳ್ಳಲು ಆತುರ ಪಡುತ್ತಿದ್ದಳು. ಇಂಥ ಸ್ಥಿತಿಯಲ್ಲಿ ಮಾರ್ಜೀನೆಯು ಅವಳ ಬಳಿಗೆ ಬಂದು ರಾಮರಾಜನು ಆಡಿದ ಮಾತುಗಳನ್ನು ಹೇಳಿದಳು. ಅವುಗಳನ್ನು ಕೇಳಿ ಮೆಹರ್ಜಾನಳಿಗೆ ವ್ಯಸನವಾಗುವುದರ ಬದಲು ಆನಂದವಾಯಿತು; ಯಾಕೆಂದರೆ ಆಕೆಗೆ ರಾಮರಾಜನು ಬೇಕಾಗಿದ್ದನು. ಆಕೆಯು ಮುಗುಳು ನಗೆ ನಗುತ್ತ ಮಾರ್ಜೀನೆಗೆ-ಮಾರ್ಜೀನೇ. ನೀನು ಅವರಿಗೆ ಸಿಟ್ಟು ಬರುವಂತೆ ಯಾಕೆ ಮಾತಾಡಿದೆ ? ನಾನು ಮನಸ್ಸಿನಿಂದ ಅವರನ್ನು ವರಿಸಿದ್ದೇನೆ. ಪಠಾಣ ತರುಣಿಯರು ಒಬ್ಬ ಪುರುಷನಲ್ಲಿ ಮನಸನ್ನಿಟ್ಟ ಬಳಿಕ, ಅನ್ಯ ಪುರುಷರನ್ನು ಪಿತೃಸಮಾನರೆಂತಲೇ ತಿಳಿಯುವರು ! ನನಗೆ ಹಿಂದೂವೇ ಪತಿಯಾಗಬೇಕೆಂದು ಅಲ್ಲಾನ ಸಂಕೇತವಿದ್ದಂತೆ ತೋರುತ್ತದೆ ! ಏನೇ ಇರಲಿ ರಾಮರಾಜನು ನನ್ನ ಪತಿಯು, ಅವರು ನನ್ನ ಪ್ರಾಣೇಶ್ವರರು. ಅವರನ್ನಗಲಿ ನಾನು ಒಂದು ಕ್ಷಣವಾದರೂ ಇರಲಾರೆನು ! ನೀನು ಹ್ಯಾಗಾದರೂ ಮಾಡಿ ಅವರ ಸಿಟ್ಟು ಇಳಿಸಿ, ಅವರು ಪ್ರೇಮದಿಂದ ನನ್ನ ಪಾಣಿಗ್ರಹಣ ಮಾಡುವಂತೆ ಮಾಡು ! ಅನ್ನಲು ಬೆಪ್ಪಾಗಿ ಕುಳಿತುಕೊಂಡಿದ್ದ ಸರಳಮನಸ್ಸಿನ ಆ ಮಾರ್ಜೀನೆಯ ಮುಖದಿಂದ, “ಎಲ! ಇದೇನು ?” ಎಂಬ ಶಬ್ದವು ತಟ್ಟನೆ ಹೊರಟಿತು !! ಪ್ರಿಯತರುಣ ವಾಚಕರೇ. ಎಚ್ಚರಿಕೆ ಸಿಕ್ಕಸಿಕ್ಕ ಬೀಜಗಳು ನಿಮ್ಮ ಮನೋಭೂಮಿಯಲ್ಲಿ ಬಿತ್ತದಂತೆ ನೀವು ಜಾಗರೂಕರಾಗಿರತಕ್ಕದ್ದು ! ಇಲ್ಲದಿದ್ದರೆ ಮೆಹರ್ಜಾನ-ರಾಮರಾಜರಂತೆ ನೀವು ವಿವೇಕ ಭ್ರಷ್ಟರಾದೀರಿ !!!


****