ಈ ಪುಟವನ್ನು ಪ್ರಕಟಿಸಲಾಗಿದೆ

೨೪
ಕನ್ನಡಿಗರ ಕರ್ಮಕಥೆ

ಆದರೆ ಆ ಸುಗುಣವನ್ನು ಪ್ರಸಂಗ ವಶಾತ್ ಮಣ್ಣುಗೂಡಿಸುವಷ್ಟು ದುರ್ಗುಣಗಳೂ ಅವನಲ್ಲಿ ಇದ್ದದ್ದರಿಂದ, ಆತನ ಮಹತ್ವಾಕಾಂಕ್ಷೆಯು ನಿಷ್ಟುರವಾದದ್ದೆಂದು ಹೇಳಲಾಗುವುದಿಲ್ಲ. ಆತನು ವಿಜಯನಗರದ ಕೃಷ್ಣದೇವರಾಯನಂಥ ಪ್ರತಾಪಿಯ ದರ್ಬಾರದಲ್ಲಿ ದೊಡ್ಡ ಪದವಿಗೇರುವ ಮಹತ್ವಾಕಾಂಕ್ಷೆಗೆ ಬಲಿಬಿದ್ದು, ಕೃಷ್ಣದೇವರಾಯನ ಮನಸ್ಸನ್ನು ಒಲಿಸಿಕೊಳ್ಳುವ ಭರದಲ್ಲಿ ಮೆಹರ್ಜಾನಳನ್ನು ಮರೆಯ ಹತ್ತಿದನು. ರಾಮರಾಜನು ಹೀಗೆ ಮಾಡಿದ್ದು ತಪ್ಪೆಂತಲೂ ನಾವು ಹೇಳುವುದಿಲ್ಲ. ಆ ಮಹತ್ವಾಕಾಂಕ್ಷೆಗೆ ರಾಮರಾಜನು ಕೇವಲ ಅಪಾತ್ರನೆಂತಲೂ ನಾವು ಪ್ರತಿಪಾದಿಸುವುದಿಲ್ಲ; ಆದರೆ ಆ ಮಹತ್ವದ ಪದವಿಗೆ ತಕ್ಕ ಕೃತಿಗಳನ್ನು ಆತನು ಮಾಡದಿರುವದು ಮಾತ್ರ ಅನ್ಯಾಯವು. ತನ್ನ ವೈದಿಕ ಧರ್ಮಕ್ಕೆ ವಿರುದ್ಧವಾಗಿ ಆತನು ಮೆಹರ್ಜಾನಳ ಪಾಣಿಗ್ರಹಣವನ್ನೇ ಮಾಡತಕ್ಕದ್ದಿದ್ದಿಲ್ಲ ; ಒಂದು ಪಕ್ಷದಲ್ಲಿ ಮಾಡಿದರೂ ಮಾಡಲಿ ಮುಖ್ಯ ಪತ್ನಿಯನ್ನಾಗಿ ಮಾಡುವೆನೆಂದು ಆಕೆಗೆ ವಚನ ಕೊಡತಕ್ಕದ್ದಿದ್ದಿಲ್ಲ; ಒಮ್ಮೆ ವಚನ ಕೊಟ್ಟ ಬಳಿಕ ಅದರಂತೆ ನಡೆಯುವುದು ಪೌರುಷಕ್ಕೆ ಒಪ್ಪುವ ಮಾತಾಗಿತ್ತು ; ಆದರೆ ರಾಮರಾಜನು ಹಾಗೆ ಮಾಡದೆ ಮಹತ್ವಾಕಾಂಕ್ಷೆಯಿಂದ ವಚನಭಂಗದ ಹಾದಿಯನ್ನು ಹಿಡಿದನು, ರಾಮರಾಜನ ಧೈರ್ಯ, ಸಾಹಸ, ಪರಾಕ್ರಮ, ರಾಜಕಾರಣ ಕುಶಲತೆ ಮುಂತಾದ ಗುಣಗಳಿಗೆ ಮೆಚ್ಚಿ, ಕೃಷ್ಣದೇವರಾಯನು ಆತನನ್ನು ದೊಡ್ಡ ಪದವಿಗೇರಿಸುತ್ತ ನಡೆದನು. ಕಡೆಗೆ ಆತನು ತನ್ನ ಮಗಳನ್ನು ರಾಮರಾಜನಿಗೆ ಕೊಟ್ಟು ಅವನಿಗೆ ತನ್ನ ಮಂತ್ರಿ ಪದವಿಯನ್ನು ಕೊಡಬೇಕೆಂದು ಯೋಚಿಸಿದನು ಅದರಿಂದ ರಾಮರಾಜನ ಬಾಯಲ್ಲಿ ಜುಳು ಜುಳು ನೀರು ಬರಹತ್ತಿದವು ! ಇಂಥ ಪ್ರಸಂಗದಲ್ಲಿ ರಾಮರಾಜನು ಯವನ ಸುಂದರಿಯ ಪಾಣಿಗ್ರಹಣ ಮಾಡಿದ್ದು ಆತನ ಉತ್ಕರ್ಷಕ್ಕೆ ಅಡ್ಡಾಗಹತ್ತಿತು. ಕೃಷ್ಣದೇವರಾಯನಂಥ ವೈದಿಕ ಧರ್ಮಾಭಿಮಾನಿಯಾದ ರಾಜನಿಗೂ, ಆತನ ಪ್ರಜೆಗಳಿಗೂ ಈ ಧಾರ್ಮಿಕ ದ್ರೋಹವು ಹ್ಯಾಗೆ ಸೇರಬೇಕು ? ಆದ್ದರಿಂದ ರಾಮರಾಜನು ತನ್ನ ಮಂತ್ರಿ ಪದವಿಗೆ ತೊಂದರೆ ಬಂದೀತೆಂದು ಭಯಪಟ್ಟು, ಕುಂಜವನದಲ್ಲಿ ಗುಪ್ತವಾಗಿದ್ದ ಮೆಹರ್ಜಾನಳ ಬಳಿಗೆ ಜನರ ಸಂಶಯಕ್ಕೆ ಆಸ್ಪದವಾಗದಂತೆ ಕದ್ದುಮುಚ್ಚಿ ಕೂಡಿದಾಗೊಮ್ಮೆ ಹೋಗಹತ್ತಿದನು.

ಈ ಸ್ಥಿತಿಯು ಮೆಹರ್ಜಾನಳಿಗೆ ಸರಿಬರಲಿಲ್ಲ. ರಾಮರಾಜನು ತನ್ನನ್ನು ಉದಾಸೀನ ಮಾಡುವನೆಂದು ಅಕೆಯು ಭಾವಿಸಹತ್ತಿ, ಅದರ ಬಗ್ಗೆ ರಾಮರಾಜನನ್ನು ಸ್ಪಷ್ಟವಾಗಿ ಕೇಳಹತ್ತಿದಳು. ರಾಮರಾಜನು ಸುಳ್ಳೊಂದು ಸೊಟ್ಟೊಂದು ನೆವಹೇಳಿ ಮೆಹರ್ಜಾನಳನ್ನು ರಮಿಸಹತ್ತಿದನು. ಈ ಸ್ಥಿತಿಯು