ಅಪರಾಧದ ಪ್ರಾಯಶ್ಚಿತ್ತಕ್ಕಾಗಿಯೇ ಇಂದಿನಿಂದ ನಾನು ವಿಷಯಸುಖದ ಆಸೆಯನ್ನು ಬಿಟ್ಟುಬಿಡುವೆನು. ಇನ್ನು ಮೇಲೆ ನಾನು ರಾಮರಾಜರ ಮುಖಾವಲೋಕನವನ್ನು ಮಾಡಲಿಕ್ಕಿಲ್ಲ : ಈ ಕುಂಜವನದಲ್ಲಿ ನಿಂತು ನೀರು ಕುಡಿಯಲಿಕ್ಕಿಲ್ಲ. ಪ್ರಸಂಗ ಒದಗಿದಾಗ ಇದರ ಸೇಡು ತೀರಿಸಿಕೊಂಡರೇ, ನಾನು ಪಠಾಣಜಾತಿಯಲ್ಲಿ ಹುಟ್ಟಿದವಳು. ಹೀಗನ್ನಲು, ಮಾರ್ಜೀನೆಯು-ಮೆಹರ್ಜಾನ, “ಕೆಟ್ಟದನ್ನು ಅಟ್ಟವಳೇ ಜಾಣಳೆಂಬಂತೆ, ಈಗ ಕೆಟ್ಟು ಹೋಗಿರುವ ಕೆಲಸವನ್ನು ತಿದ್ದಿಕೊಳ್ಳುವದರಲ್ಲಿಯೇ ಜಾಣತನವುಂಟು. ಮೊದಲೇ ಅಡ್ಡಹಾದಿಗೆ ಹೋಗತಕ್ಕದಿದ್ದಿಲ್ಲ. ಹೋದಬಳಿಕ ಅದೇ ಹಾದಿಯ ಸಹಾಯದಿಂದ ಒಳ್ಳೆಯ ಹಾದಿಯನ್ನು ಹುಡುಕಿ ಇದ್ದದ್ದರಲ್ಲಿ ಹಿತಮಾಡಿಕೊಳ್ಳತಕ್ಕದ್ದು. ನೀನು ಪತಿಯೆಂದು ರಾಮರಾಜನ ಪಾಣಿಗ್ರಹಣ ಮಾಡಿರುತ್ತೀ. ಅಂದ ಬಳಿಕ ಪತಿದ್ರೋಹಕ್ಕೆ ಗುರಿಯಾಗುವದು ಪಾತಕವೇ ಸರಿ. ಯಾವದಾದರೂ ಒಂದು ದಂಡೆಯನ್ನು ಹೊಂದತಕ್ಕದ್ದು. ಆದ್ದರಿಂದ ಹ್ಯಾಗಿದ್ದರೂ ನೀನು ರಾಮರಾಜನನ್ನು ಹೊಂದಿಕೊಂಡಿರುವದೇ ನೆಟ್ಟಗೆ ಕಾಣುತ್ತದೆ. ಇಲ್ಲದಿದ್ದರೆ ಇಬ್ಬರ ಅನರ್ಥಕ್ಕೂ ಕಾರಣವಾಗಬಹುದು, ಮಹಾರಾಜರು ಮಂತ್ರಿಪದವಿಯ ಮಹತ್ವಾಕಾಂಕ್ಷೆಯಿಂದ ಕೆಲವು ದಿನ ಕುಂಜವನಕ್ಕೆ ಬಾರಿದಿದ್ದರೆ ತಪ್ಪೇನು ? ಆಮೇಲೆ ಅವರು ನಿನ್ನನ್ನು ಪಟ್ಟರಾಣಿಯಾಗಿ ಮಾಡಿಕೊಳ್ಳಲಿಕ್ಕಿಲ್ಲೆಂದು ನೀನು ಯಾಕೆ ತಿಳಕೊಳ್ಳತ್ತೀ ? ಮೆಹರ್, ಸ್ವಲ್ಪ ಶಾಂತಳಾಗು. ಯಾವದಕ್ಕಾದರೂ ಸ್ವಲ್ಪ ಕೂತು ಮಲಗಬೇಕು. ಮನಸ್ಸಿನಲ್ಲಿ ಏನಾದರೂ ಬಂದ ಕೂಡಲೆ ಹುರ್‍ರೆನ್ನುವದು ನೆಟ್ಟಗಲ್ಲ. ಅದರಿಂದ ಮುಂದೆ ಪಶ್ಚಾತ್ತಾಪಕ್ಕೆ ಗುರಿಯಾಗಬೇಕಾದೀತು. ನಿನ್ನ ಸಂಗಡ ಬರಲಾರದ್ದಕ್ಕೆ ನಾನು ಇಷ್ಟು ಮಾತಾಡುತ್ತೇನೆಂದು ನೀನು ತಿಳಿಯಬೇಡ. ಮೆಹರ್, ನನ್ನದೇನು ಆಳುತ್ತದೆ ಹೇಳು ; ಆದರೆ ಹಿಂದುಮುಂದುಯಿಲ್ಲದೆ ಅತಂತ್ರವಾಗಿರುವ ನಿನಗೆ, ಹಿತದ ಮಾತನ್ನು ಹೇಳುತ್ತೇನೆ. ಸ್ವಚ್ಛಂದ ವೃತ್ತಿಯಿಂದ ಕುಂಜವನದಿಂದ ಹೊರಟು ಹೋಗುವುದು ನಿನ್ನ ಶೀಲಕ್ಕೂ ಮರ್ಯಾದೆಗೂ ಒಪ್ಪುವದಿಲ್ಲ. ಅತ್ತ ಮುಸಲ್ಮಾನರೂ ನಮ್ಮನ್ನು ನಿರಾಕರಿಸಬಹುದು ; ಇತ್ತ ರಾಮರಾಜನ ಆಸರವೂ ತಪ್ಪುವದು. ಆದ್ದರಿಂದ ಈಗ ನೀನು ಸಂತಾಪದಲ್ಲಿ ಮಾಡಿರುವ ನಿಶ್ಚಯಕ್ಕೆ ಮಹತ್ವ ಕೊಡಬೇಡ. ಮುಂದೆ ಅಂಥ ಪ್ರಸಂಗ ಬಂದರೆ, ಈಗಿನ ನಿಶ್ಚಯದಂತೆ ಆಗ ನಡೆಯಲಿಕ್ಕೆ ಬಂದೀತು. ಇದರ ಮೇಲೆಯೂ ನಿನ್ನ ಆಗ್ರಹವು ಇದ್ದರೆ, ನಿನ್ನ ಬೆನ್ನುಹತ್ತಿ ಬರಲಿಕ್ಕೆ ನಾನು ಸಿದ್ಧಳೇ ಇದ್ದೇನೆ, ಮೆಹರ್ ಇನ್ನು ನನ್ನದೇನಾಗಬೇಕಾಗಿದೆ ? ನಿನ್ನ ಸಲುವಾಗಿ ನಾನು ಪ್ರಾಣವನ್ನಾದರೂ ಕೊಡಲಿಕ್ಕೆ ಸಿದ್ಧಳಿರುವೆನು.
ಪುಟ:Kannadigara Karma Kathe.pdf/೬೨
ಈ ಪುಟವನ್ನು ಪ್ರಕಟಿಸಲಾಗಿದೆ
ಸ್ರೀ ಸಾಹಸ
೪೭