ಭವ್ಯಮೂರ್ತಿಯನ್ನು ನೋಡಿ ಜನರು ನಗುತ್ತಿದ್ದರಲ್ಲದೆ, ಧನಮಲ್ಲನಿಗೆ ಆತನ ಜನರ ಗೊತ್ತೇನೂ ಹತ್ತಲಿಲ್ಲ. ಧನಮಲ್ಲನು ದರ್ಗೆಯ ಹಿಂದೆ ಹೋಗಿ ನೋಡಿದನು ದರ್ಗೆಯಿಂದ ಬೇರೆ ಬೇರೆ ಕಡೆಗೆ ಹೋಗುವ ಮಾರ್ಗಗಳನ್ನು ಹಿಡಿದುಹೋಗಿ ಅಲ್ಲಿ ಬರುವ ಜನರನ್ನು ಏನೇನೋ ಸನ್ನೆ ಮಾಡಿ ಕೇಳಿದನು, ಆದರೆ ಅವರಿಂದ ಪ್ರಯೋಜನವೇನೂ ಆಗಲಿಲ್ಲ. ದರ್ಗೆಯೊಳಗಿನ ಮುಖ್ಯ ಮನುಷ್ಯನನ್ನು ಕೇಳಲು, ಆತನು ಮಧ್ಯಾಹ್ನದಲ್ಲಿ ದರ್ಶನಕ್ಕೆ ಬಂದರು ಆಗಲೇ ಹೋದರೆಂದು ಹೇಳಿದನು, ಹಲವು ಸಾರೆ ದರ್ಶನಕ್ಕೆ ಬಂದವರಾದ್ದರಿಂದ ಧನಮಲ್ಲನ ಗುರುತೂ, ಮಾರ್ಜೀನೆ ಮೆಹರ್ಜಾನರ ಗುರುತೂ ಆ ಮುಖ್ಯ ಮನುಷ್ಯನಿಗೆ ಇತ್ತು. ಆತನೂ ಧನಮಲ್ಲನ ಶೋಧಕ್ಕೆ ಸಹಾಯ ಮಾಡಿದಂತೆ ತೋರಿಸಿದನು. ಕಡೆಗೆ ಹೊತ್ತು ಮುಳುಗಲಿಕ್ಕೆ ಅರ್ಧ ತಾಸು ಉಳಿಯಿತು. ಆಗ ಧನಮಲ್ಲನು ಮಾರ್ಜೀನೆ ಮೆಹರ್ಜಾನರನ್ನು ಹುಡುಕಬೇಕೋ, ಅವರು ಎಲ್ಲಿ ಹೋದರೆಂಬ ಸುದ್ದಿಯನ್ನು ರಾಮರಾಜನಿಗೆ ಹೇಳಲಿಕ್ಕೆ ವಿಜಯನಗರಕ್ಕೆ ಹೋಗಬೇಕೋ, ಎಂದು ಆಲೋಚಿಸಹತ್ತಿದನು. ಕಡೆಗೆ ವಿಜಯನಗರಕ್ಕೆ ಹೋಗಬೇಕೆಂದು ನಿರ್ಧರಿಸಿ, ಅವನು ರಥಕ್ಕೆ ಎತ್ತುಗಳನ್ನು ಹೂಡಿ ವಿಜಯನಗರದ ಹಾದಿಯನ್ನು ಹಿಡಿದನು.
****