ಬರುವೆನು, ಎಂದು ಹೇಳಿದನು. ಅದನ್ನು ಕೇಳಿ ತಿರುಮಲ ರಾಯನು ಹೆಚ್ಚು ಮಾತಾಡಲಾರದೆ ತಮ್ಮನ ಒಪ್ಪಿಗೆಯನ್ನು ಪಡೆದು, ಆತನಿಗೆ ಬೇಗನೆ ಬರಬೇಕೆಂದು ಹೇಳಿ ಹೊರಟುಹೋದನು. ಇತ್ತ ರಾಮರಾಜನು ಧನಮಲ್ಲನನ್ನು ಕರೆಕಳುಹಲು, ದಣಿದು ಹೆಣವಾಗಿ ಬಿದ್ದುಕೊಂಡಿದ್ದ ಆತನು, ಒಟಗುಟ್ಟುತ್ತ ನಿರ್ವಾಹವಿಲ್ಲದೆ ತನ್ನ ಕುದುರೆಯನ್ನು ಹತ್ತಿಕೊಂಡು ರಾಮರಾಜನ ಬಳಿಗೆ ಬಂದನು. ಆಮೇಲೆ ಅವರಿಬ್ಬರು ತಮ್ಮ ಕುದುರೆಗಳನ್ನು ಒತ್ತರದಿಂದ ನಡೆಸುತ್ತ ಕುಂಜವನದ ಕಡೆಗೆ ಸಾಗಿದರು. ಹಾದಿಯಲ್ಲಿ ಹೋಗಹೋಗುತ್ತ ರಾಮರಾಜನು ಧನಮಲ್ಲನನ್ನು ಕುರಿತು - ಧನಮಲ್ಲ, ಏನೇನು ಸಂಗತಿಯು ವರ್ತಿಸಿತೆಂಬುದನ್ನು ಇನ್ನೊಮ್ಮೆ ಹೇಳು, ಎಂದು ಕೇಳಲು, ಧನಮಲ್ಲನು ಯಾವತ್ತು ವೃತ್ತಾಂತವನ್ನು ಒಂದುಳಿಯದಂತೆ ಹೇಳಹತ್ತಿದನು ; ಆದರೆ ವಿಚಾರ ಮಗ್ನನಾದ ರಾಮರಾಜನ ಲಕ್ಷ್ಯವು ಪೂರ್ಣವಾಗಿ ಅತ್ತ ಕಡೆಗೆ ಇದ್ದಿಲ್ಲ. ಆದರೂ ಆತನು ಸುದ್ದಿಯನ್ನು ಕೇಳುವವನಂತೆ ನಟಿಸುತ್ತಿದ್ದನು. ಈ ಸ್ಥಿತಿಯಲ್ಲಿ ಅವರು ಒತ್ತರದಿಂದ ಸಾಗುತ್ತ ಕುಂಜವನದ ಸನಿಯಕ್ಕೆ ಬಂದರು. ಆಗ ರಾಮರಾಜನು ಧನಮಲ್ಲನ್ನನು ಕುರಿತು-ನೀನು ಸಂಗನಪಲ್ಲಿಗೆ ಹೋಗಿ, ಮೆಹರ್ಜಾನ – ಮಾರ್ಜೀನೆಯರ ವೃತ್ತಾಂತವನ್ನು ತಿಳಿದು ಬಂದು ನನಗೆ ಹೇಳು. ಅವರು ನಿನ್ನೆ ರಾತ್ರಿಯಲ್ಲಿ ಎಲ್ಲಿಗೂ ಹೋಗಿರಲಿಕ್ಕಿಲ್ಲ; ಅಲ್ಲಿಯೇ ಎಲ್ಲಿಯಾದರೂ ಗುಪ್ತ ರೀತಿಯಿಂದ ವಾಸಿಸಿರಬಹುದು. ನಡೆ, ಬೇಗನೆ ಹೋಗಿ ಬಾ ಅವರ ಸುದ್ದಿಯನ್ನು ತರದಿದ್ದರೆ ನಿನ್ನ ಪರಿಣಾಮವಾಗಲಿಕ್ಕಿಲ್ಲ. ನಡೆ, ನಿಲ್ಲಬೇಡ, ಎಂದು ಹೇಳಲು ಧನಮಲ್ಲನು ಮನಸ್ಸಿನಲ್ಲಿ ತಳಮಳಗೊಳ್ಳುತ್ತ ಸಂಗನಪಲ್ಲಿಯ ಹಾದಿಯನ್ನು ಹಿಡಿದನು.
ಇತ್ತ ರಾಮರಾಜನು ಕುಂಜವನವನ್ನು ಪ್ರವೇಶಿಸಿದನು. ಮೆಹರ್ಜಾನಳ ಮೇಲೆ ಆತನ ಪ್ರೇಮ ಬಹಳ. ಮಂತ್ರಿಪದವಿಯ ಮಹತ್ವಾಕಾಂಕ್ಷೆಯಿಂದ ತಾನು ಮೆಹರ್ಜಾನಳನ್ನು ನಿರಾಕರಿಸಿದ್ದಕ್ಕಾಗಿ ಆತನಿಗೆ ಈಗ ಪೂರ್ಣ ಪಶ್ಚಾತ್ತಾಪವಾಗಿತ್ತು. ಮೆಹರ್ಜಾನಳ ಸಹವಾಸದಲ್ಲಿರುವಾಗ ಆನಂದಕ್ಕೆ ಕಾರಣವಾದ ಸ್ಥಳಗಳೆಲ್ಲ, ಈಗ ಆತನ ದುಃಖಕ್ಕೆ ಕಾರಣವಾದವು. ಕುಂಜವನದೊಳಗಿನ ಮಂದಿರ, ಆ ಮಂದಿರದೊಳಗಿನ ಶಯನಗೃಹ ವನಮಧ್ಯದಲ್ಲಿದ್ದ ಪುಷ್ಕರಣಿ, ಅದರ ಸುತ್ತಲಿನ ಮನೋಹರವಾದ ಲತಾಮಂಟಪಗಳು ಇವುಗಳನ್ನು ನೋಡಿ ರಾಮರಾಜನಿಗೆ ಬಹಳ ವ್ಯಸನವಾಯಿತು. ಆತನು ದುಃಖವೇಗವನ್ನು ತಡೆಯಲಾರದೆ ಪುಷ್ಕರಣಿಯಲ್ಲಿ ಸ್ನಾನಮಾಡಿ ವಿಶ್ರಾಂತಿಯನ್ನು ಹೊಂದಬೇಕೆಂದು ಭಾವಿಸಿ, ತನ್ನ ಉಡುಪು ತೊಡಪುಗಳನ್ನು ಕಳೆದಿಟ್ಟನು. ಇನ್ನು ಆತನು ಪುಷ್ಕರಣಿಯಲ್ಲಿ ಧುಮುಕತಕ್ಕವನು,