ಈ ಪುಟವನ್ನು ಪ್ರಕಟಿಸಲಾಗಿದೆ

೬೪

ಕನ್ನಡಿಗರ ಕರ್ಮಕಥೆ

ದೂತನನ್ನೂ ಕಳಿಸಿದ್ದೇನೆ. ಆತನು ಬಹಳ ಮಾಡಿ ನಾಳಿಗೆ ಬಂದರೂ ಬರಬಹುದು. ಆಮೇಲೆ ಹ್ಯಾಗೂ ವಿಚಾರ ಮಾಡೇ ಮಾಡಬೇಕಾಗುತ್ತದೆ. ಈಗ ಚೆನ್ನಾಗಿ ವಿಶ್ರಾಂತಿಯು ದೊರೆಯದಿದ್ದರೆ, ಪ್ರಕೃತಿಯು ಕೆಡುವ ಸಂಭವವಿರುತ್ತದೆ. ನಾನು ಹೋದ ಬಳಿಕ ಇಲ್ಲಿ ಯಾವ ಸಂಗತಿಗಳು ನಡೆದವೆಂಬುದನ್ನು ವಿಚಾರಿಸಲಿಕ್ಕೂ, ಅವನ್ನು ಕೇಳಲಿಕ್ಕೂ ನನಗೆ ಉತ್ಸುಕತೆಯಿಲ್ಲ. ನೀವು ಇದ್ದ ಬಳಿಕ ಯಾವ ಮಾತಿಗೂ ಕೊರತೆಯಾಗದು ಎಲ್ಲವೂ ಅನುಕೂಲಿಸಿಯೇ ಅನುಕೂಲಿಸುವದು, ಎಂದು ನುಡಿಯಲು, ತಿರುಮಲರಾಯನು, ನಿನಗೆ ಅಷ್ಟು ತ್ರಾಸವಾಗಿದ್ದರೆ ಈಗ ನಾನಾದರೂ ಹೆಚ್ಚಿಗೆ ಮಾತಾಡುವದಿಲ್ಲ. ನಾಳೆ ಮಾತಾಡೋಣವಂತೆ, ನಾನು ಮೊದಲು ಹೇಳಿದಂತೆ ಮುಹೂರ್ತವು ತೀರ ಸಮೀಪಿಸಿರುವದರಿಂದ ನೀನು ಎಲ್ಲಿಯೂ ಹೋಗಬಾರದು. ಅರಸರು ಸುಪ್ರಸನ್ನವಾಗಿರುವತನಕ ಎಲ್ಲ ನೆಟ್ಟಿಗೆ ಆತನು ಕ್ಷೋಭಿಸಿದರೆ ಕೆಲಸವು ಕೆಟ್ಟುಹೋದೀತು, ನಮಗೆ ಈಗ ಅಭ್ಯುದಯ ಕಾಲವು ಒದಗಿರುವಂತೆ ತೋರುತ್ತದೆ ಎಂದು ನುಡಿಯುತ್ತಿರಲು, ರಾಮರಾಜನು ಅಣ್ಣನನ್ನು ಮುಂದೆ ಮಾತಾಡಗೊಡದೆ ನಾನು ಇನ್ನು ಮೇಲೆ ಎಲ್ಲಿಗೂ ಹೋಗುವದಿಲ್ಲ; ಆದರೆ ಇನ್ನು ನನಗೆ ಸ್ವಸ್ಥವಾಗಿ ಮಲಗಗೊಡಿರಿ. ನೀವು ಹೇಳುವ ಸುದ್ದಿಯು ಅತ್ಯಂತ ಆನಂದದಾಯಕವಾದದ್ದು ; ಅದರೆ ಸದ್ಯಕ್ಕೆ ನಾನು ಕಣ್ಣುತುಂಬ ನಿದ್ದೆ ಮಾಡದ ಹೊರತು, ನನಗೆ ಯಾವ ಮಾತಿನಿಂದಲೂ ಆನಂದವಾಗವ ಹಾಗಿಲ್ಲ. ಶರೀರವು ಸುಖದಿಂದಿದ್ದರೆ, ಎಲ್ಲದರಿಂದ ಸುಖವು. ನಾನು ನಿದ್ದೆ ಮಾಡಿ ವಿಶ್ರಾಂತಿಯನ್ನು ಹೊಂದಿ ನಾಳೆ ಬೆಳಗಿನಲ್ಲಿ ತಮ್ಮ ದರ್ಶನಕ್ಕೆ ಬರುವೆನು. ಇಬ್ಬರೂ ಮಹಾರಾಜರ ದರ್ಶನಕ್ಕೆ ಹೋಗೋಣ ಅಲ್ಲಿಯವರೆಗೆ ಮಹಾರಾಜರಿಗೆ ಏನಾದರೂ ಹೇಳಿ ಸಮಾಧಾನ ಮಾಡಿರಿ. ಇಲ್ಲದಿದ್ದರೆ, ಊರಿಗೆ ಬಂದು ಭೆಟ್ಟಿಗೆ ಬರಲಿಲ್ಲೆಂದು ಅವರು ವಿಕಲ್ಪಭಾವವನ್ನು ತಾಳಿಗೀಳಿಯಾರು, ಎಂದು ನುಡಿದು ಸುಮ್ಮನಾದನು. ಇನ್ನು ಮೇಲೆ ಬಹಳ ಹೊತ್ತು ಕುಳಿತುಕೊಳ್ಳುವುದರಲ್ಲಿ ಅರ್ಥವಿಲ್ಲೆಂತಲೂ, ರಾಮರಾಜನ ಸ್ಥಿತಿಯು ವಿಲಕ್ಷಣವಾಗಿರುವದೆಂತಲೂ ತಿಳಿದು, ತಿರುಮಲರಾಯನು ಹೊರಟುಹೋದನು, ಆದರಿಂದ ರಾಮರಾಜನಿಗೆ ಸಮಾಧಾನವಾದಂತಾಗಿ, ಆತನು ಪುನಃ ಪಲ್ಲಂಗದ ಮೇಲೆ ಬಿದ್ದುಕೊಂಡನು. ಇನ್ನು ಮೇಲೆ ಯಾರೂ ಬಂದರೂ ತನ್ನನ್ನು ಎಬ್ಬಿಸಬಾರದೆಂದು ರಾಮರಾಜನು ಸೇವಕರಿಗೆ ಕಟ್ಟಪ್ಪಣೆ ಮಾಡಿ, ನಾನು ಹೀಗೆ ಹೇಳಿ ಮಲಗಿರುವೆನೆಂದು ದರ್ಶನಕ್ಕೆ ಬಂದವರ ಮುಂದೆ ಸ್ಪಷ್ಟವಾಗಿ ಹೇಳಬೇಕೆಂದು ಸೇವಕರಿಗೆ ಸೂಚಿಸಿದ್ದನು.