ಈ ಪುಟವನ್ನು ಪ್ರಕಟಿಸಲಾಗಿದೆ

೭೦
ಕನ್ನಡಿಗರ ಕರ್ಮಕಥೆ

ತನ್ನನು ಹಳಿದು ಕೊಳ್ಳುವದನ್ನು ಬಿಟ್ಟು, ಮೆಹರ್ಜಾನಳ ಮೇಲೆ ತಪ್ಪುಹೊರಿಸುವ ಉದ್ದೇಶದಿಂದ ತನ್ನೊಳಗೆ- “ಹೀಗೆ ಆಕೆಯು ಹೊರಟುಹೋಗುವಂಥ ಅಪರಾಧವನ್ನಾದರೂ ನಾನೇನು ಮಾಡಿದ್ದೇನು ? ಕಾರ್ಯ ನಿಮಿತ್ತದಿಂದ ಕೆಲವು ದಿನ ಕುಂಜವನಕ್ಕೆ ಬರುವುದಿಲ್ಲೆಂದು ನಾನು ಪತ್ರ ಬರೆದರೆ, ಕೊಟ್ಟ ವಚನಗಳನ್ನು ಮುರಿದ ಹಾಗಾಯಿತೇ ! ರಾಜಕಾರಣಗಳಲ್ಲಿ ಪ್ರಸಂಗಕ್ಕನುಸರಿಸಿ ಸೋಗು ಹಾಕಬೇಕಾಗುತ್ತದೆಂಬ ಮಾತು ಆಕೆಗೆ ತಿಳಿಯಬಾರದೇನು ? ಆಕೆಗೆ ಇಲ್ಲಿ ಯಾತರ ಕೊರತೆಯಿತ್ತು ? ಇನ್ನು ಮೇಲೆ ಇಷ್ಟು ಸುಖವನ್ನು ಆಕೆಯು ಬೇರೆ ಕಡೆಗೆ ಪಡೆಯಬಹುದೋ ? ಅಂದ ಬಳಿಕ ಆಕೆಯು ಸ್ವಲ್ಪ ಸಮಾಧಾನ ಮಾಡಿಕೊಳ್ಳತಕ್ಕದ್ದಿತ್ತು” ಎಂದು ತನ್ನೊಳಗೆ ಮಾತಾಡಿಕೊಂಡು ತನ್ನ ಸಮಾಧಾನ ಮಾಡಿಕೊಳ್ಳಹೋದನು ; ಆದರೆ ಅದರಿಂದ ಆತನಿಗೆ ಸಮಾಧಾನವಾಗಲಿಲ್ಲ. ಆ ಶಯನಗೃಹದಲ್ಲಿ ಆತನು ಬಹಳ ಹೊತ್ತು ಕುಳಿತುಕೊಳ್ಳಲಾರದೆ ಅಲ್ಲಿಂದ ಹೊರಟು ಪುಷ್ಕರಣಿಯ ತೀರಕ್ಕೆ ಹೋದನು. ಅಲ್ಲಿ ಆತನಿಗೆ ಅಂದಿನ ಮೆಹರ್ಜಾನಳ ನೌಕಾಕ್ರೀಡೆಯೂ, ಆಕೆಯ ಮನೋಹರವಾದ “ಹೇರಿ ಆಜ ಸಖೀಗೀ ಮೇ ಕ್ಯಾ ಕಹು” ಎಂಬ ಹಿಂದುಸ್ಥಾನಿಯ ಮಂಜುಳಗಾನವೂ, ತಾನು ಅದಕ್ಕೆ ಪ್ರತ್ಯುತ್ತರವಾಗಿ ಗಾನಮಾಡಿದ "ನಿಭೃತ ನಿಕೃಂಜಗೃಹಂ” ಎಂಬ ಸಂಸ್ಕೃತ ಪದ್ಯವೂ ನೆನಪಾಗಿ ಆತನ ಅಂತಃಕರಣವು ಮತ್ತಷ್ಟು ವ್ಯಥಿತವಾಗಹತ್ತಿತು. ಆತನು ಅಲ್ಲಿಯೂ ಬಹಳ ಹೊತ್ತು ನಿಲ್ಲದೆ ಭ್ರಮಿಷ್ಟನಂತೆ ಕುಂಜವನದ ಬೇರೆ ಬೇರೆ ಭಾಗಗಳಲ್ಲಿ ಸಂಚರಿಸಿ ಕಾಲಹರಣ ಮಾಡಿದನು. ಅಂದಿನ ರಾತ್ರಿಯೂ ಆತನಿಗೆ ಕಷ್ಟದಾಯಕವಾಯಿತು. ಆ ರಾತ್ರಿಯಲ್ಲಿ ಮೆಹರ್ಜಾನಳ ಸಂಬಂಧದ ಕನಸುಗಳು ಬಿದ್ದು ಆತನ ದುಃಖವು ಮತ್ತಷ್ಟು ಹೆಚ್ಚಾಯಿತು.

ಮೆಹರ್ಜಾನಳನ್ನು ಹುಡುಕಲಿಕ್ಕೆ ರಾಮರಾಜನಿಗೆ ಮನುಷ್ಯರ ಕೊರತೆ ಇದ್ದಿಲ್ಲ : ಆದರೆ ತಾನು ಧನಮಲ್ಲನಿಗೆ ಬಹಳ ಸಿಟ್ಟುಮಾಡಿ ಕಳಿಸಿರುವದರಿಂದ, ಆತನೇ ಇನ್ನು ಒಂದೆರಡು ದಿನಗಳಲ್ಲಿ ಮೆಹರ್ಜಾನಳ ಗೊತ್ತು ಹಚ್ಚಿಕೊಂಡು ಬರುವನೆಂಬ ನಂಬಿಗೆಯಿಂದ ರಾಮರಾಜನು ಯಾರನ್ನೂ ಹುಡುಕಲಿಕ್ಕೆ ಕಳಿಸಲಿಲ್ಲ. ಇದಲ್ಲದೆ. ಸಿಟ್ಟಿನ ಭರದಲ್ಲಿ ಹೋದ ಮೆಹರ್ಜಾನಳು ಸಿಟ್ಟು ಇಳಿದ ಬಳಿಕ ಆಕೆಯು ತಾನಾಗಿ ಬರಬಹುದೆಂಬ ಆಸೆಯೂ ಆತನನ್ನು ಕೆಲಮಟ್ಟಿಗೆ ಸಮಾಧಾನಗೊಳಿಸಿತ್ತು. ಹೀಗೆ ನಾಲ್ಕೆಂಟು ದಿನಗಳು ಕ್ರಮಿಸಿದವು. ರಾಮರಾಜನ ಎಲ್ಲ ಆಸೆ ದುರಾಸೆಗಳು ವ್ಯರ್ಥವಾದವು. ಆಗ ಆತನು ಧನಮಲ್ಲನನ್ನು ಹುಡುಕಿಕೊಂಡು ಬರುವದಕ್ಕಾಗಿ ನಾಲ್ಕೂ ಕಡೆಗೆ ಆಳುಗಳನ್ನು ಕಳಿಹಿಸಿದನು.