ಈ ಪುಟವನ್ನು ಪ್ರಕಟಿಸಲಾಗಿದೆ

೮೨
ಕನ್ನಡಿಗರ ಕರ್ಮಕಥೆ

ಕಠಿಣವಾದೀತೆಂಬುದರ ಎಚ್ಚರವು ಆ ತಿಳಿಗೇಡಿ ಮಂತ್ರಿಗೆ ಹುಟ್ಟಲಿಲ್ಲ. ಕೂಡಲೆ ಆತನು ಸುಲ್ತಾನನ ಕಡೆಗೆ ವಕೀಲನನ್ನು ಕಳಿಸಿದನು. ಆದಿಲಶಹನು ವಕೀಲನ ಮಾತುಗಳನ್ನು ಕೇಳಿ ಪರಮಾನಂದಪಟ್ಟನು. “ರೋಗಿ ಬಯಸಿದ್ದೂ ಹಾಲು ಅನ್ನ, ವೈದ್ಯ ಹೇಳಿದ್ದೂ ಹಾಲು ಅನ್ನ” ಎಂಬಂತೆ ಆತನಿಗೆ ಬಹಳ ಸಂತೋಷವಾಯಿತು. ಸುಲ್ತಾನನು ತಿರುಮಲನ ಮಾತಿಗೆ ಸಂತೋಷದಿಂದ ಒಪ್ಪಿಕೊಂಡ ಬಳಿಕ, ವಿಜಯನಗರವನ್ನು ಪ್ರವೇಶಿಸುವ ದಿನವನ್ನು ಅವರಿಬ್ಬರೂ ಗುಪ್ತ ರೀತಿಯಿಂದ ಗೊತ್ತುಮಾಡಿಕೊಂಡರು. ಇತ್ತ ರಾಮರಾಜನೂ ತಿರುಮಲನನ್ನು ಸೆರೆ ಹಿಡಯುವ ದಿನವನ್ನು ಗುಪ್ತರೀತಿಯಿಂದ ಗೊತ್ತುಮಾಡಿದ್ದನು. ತಿರಮಲನು ಬಾದಶಹನೊಡನೆ ನಡೆಸಿದ ಕಾರಸ್ಥಾನದ ಗಂಧವು ಸಹ ರಾಮರಾಜನಿಗೆ ಬಡಿದಿದ್ದಿಲ್ಲ. ರಾಮರಾಜನು ತಿರುಮಲನನ್ನು, ಗೊತ್ತುಮಾಡಿದ ದಿವಸ ಸೆರೆಹಿಡಿಯಬೇಕೆಂದು ಸಂಚುಗಾರರೊಡನೆ ಯೋಚಿಸುತ್ತಿರುವದರೊಳಗೆ ರಾಮರಾಜನ ಪಕ್ಷದವನೊಬ್ಬನು ತಿರುಮಲನ ಕಡೆಗೆ ಒಡೆದು, ರಾಮರಾಜನ ಒಳಸಂಚಿನ ದಿವಸವನ್ನು ತಿರುಮಲನಿಗೆ ತಿಳಿಸಿದನು ಕೂಡಲೆ ತಿರುಮಲನು ಬಾದಶಹನನ್ನು ವಿಜಯನಗರಕ್ಕೆ ಕರೆಯಕಳುಹಿದನು. ಅತ್ತ ಹಾದಿಯನ್ನೇ ನೋಡುತ್ತ ಕುಳಿತಿದ್ದ ಬಾದಶಹನು ತಡಮಾಡದೆ ಸೈನ್ಯದೊಡನೆ ಹೊರಟು ತುಂಗಭದ್ರೆಯನ್ನು ದಾಟಿ ವಿಜಯನಗರವನ್ನು ಪ್ರವೇಶಿಸಿದನು. ತಿರುಮಲನೂ, ಅಚ್ಯುತರಾಯನೂ ಆತನನ್ನು ಎದುರುಗೊಂಡು ಕರೆತಂದು ವಿಜಯನಗರದ ಸಿಂಹಾಸನದ ಮೇಲೆ ಕೂಡ್ರಿಸಿ, ವಿಲಕ್ಷಣ ರೀತಿಯಿಂದ ಆತನ ಆದರ ಸತ್ಕಾರವನ್ನು ಮಾಡಿದರು, ಈ ವರೆಗೆ ಬಾದಶಹನು ವಿಜಯನಗರದ ಅರಸರ ಘನವಾದ ಐಶ್ವರ್ಯವನ್ನು ಜನರ ಮುಖದಿಂದ ಕೇಳುತ್ತ ಬಂದಿದ್ದನು; ಆತನಿಗೆ ಅದರ ಅನುಭವವಾಗಿದ್ದಿಲ್ಲ. ಈಗ ಆತನು ರಾಯರ ಐಶ್ವರ್ಯವನ್ನು ಕಣ್ಣುಮುಟ್ಟ ನೋಡಿ ಬೆರಗಾದನು. ಈ ಪ್ರಸಂಗದಲ್ಲಿ ತಿರುಮಲನು ಒಳ್ಳೆ ಸಂಕಟದಲ್ಲಿ ಸಿಕ್ಕಿರುವದರಿಂದ ಆತನು ಹೇಳಿದ ಹಾಗೆ ಕೇಳುವನೆಂದು ತಿಳಿದು ಸುಲ್ತಾನನು ತಿರುಮಲನಿಗೆ ಬಹು ದೊಡ್ಡ ರಕಮಿನ ಕಪ್ಪವನ್ನು ಕೇಳಿದನು; ಮತ್ತು ಇಂದಿನಿಂದ ವಿಜಯನಗರದ ಅರಸರು ವಿಜಾಪುರದ ಬಾದಶಹರ ಮಾಂಡಲೀಕತ್ವವನ್ನು ಒಪ್ಪಿಕೊಳ್ಳಬೇಕೆಂದು ಹೇಳಿದನು. ಅದಕ್ಕೆಲ್ಲ ತಿರುಮಲನು ಒಪ್ಪಿಕೊಂಡನು.

ವಿಜಾಪುರದ ಬಾದಶಹನು ಅಕಸ್ಮಾತ್ತಾಗಿ ರಾಜಧಾನಿಯನ್ನು ಪ್ರವೇಶಿಸಿದ್ದನ್ನೂ ತಿರುಮಲನು ಬಾದಶಹನ ಬೇಡಿಕೆಗಳನ್ನೆಲ್ಲ ಪೂರ್ಣ ಮಾಡಿದ್ದನ್ನೂ ಕೇಳಿ ವಿಜಯನಗರದ ಜನರಿಗೆ ಬಹಳ ವ್ಯಸನವಾಯಿತು; ಆದರೆ ಅವರ ಸೈನ್ಯದ