ಈ ಪುಟವನ್ನು ಪ್ರಕಟಿಸಲಾಗಿದೆ

೮೪
ಕನ್ನಡಿಗರ ಕರ್ಮಕಥೆ

ಮಾಡಿ ಆತನನ್ನು ತಿರುಗಿ ಕಳಿಸಿಕೊಡಿರಿ. ನಾವೆಲ್ಲರು ಬೇಕಾದ ಆಣೆ ಮಾಡಿ ಹೇಳೆಂದರೂ ಹೇಳುತ್ತೇವೆ, ನಿಮ್ಮ ಮಾತನ್ನು ನಾವು ಸರ್ವಥಾಮೀರುವದಿಲ್ಲ. ನೀವು ಹೇಳಿದ ಹಾಗೆ ಕೇಳುತ್ತೇವೆ. ಆದರೆ ವಿಜಯನಗರದ ಮೇಲೆ ಬಂದಿರುವ ಈ ಕಠಿಣ ಪ್ರಸಂಗವನ್ನು ದೂರಮಾಡಿರಿ” ಎಂದು ಹೇಳಿಕೊಂಡು ತಿರುಮಲನಿಗೆ ಮಿತಿಮೀರಿ ದೊಡ್ಡಸ್ತನವನ್ನು ಕೊಟ್ಟನು. ಮೂರ್ಖನಾದ, ತಿರುಮಲನು ಜನರ ಈ ದೊಡ್ಡಸ್ತಿಕೆಗೆ ಮರುಳಾದನು. ತಾನು ಹೋಗೆಂದರೆ ಬಾದಶಹನು ಹೋಗುವದಿಲ್ಲೆಂದು ರಾಮರಾಜನು ಆಡಿದ್ದಕ್ಕಾಗಿ ತಿರುಮಲನಿಗೆ ಬಹಳ ಸಿಟ್ಟು ಬಂದಿತು, ಅಚ್ಯುತರಾಯನು ತನ್ನ ಕೈಯೊಳಗಿರುವಂತೆ, ಆದಿಲಶಹನೂ, ತನ್ನ ಕೈಯೊಳಗಿರುವನೆಂದು ಆ ತಿಳಿಗೇಡಿ ತಿರುಮಲನು ತಿಳಕೊಂಡಿದ್ದನು. ಜನರು ಸುಮ್ಮನಾದ ಮೇಲೆ ಆತನು ಅವರನ್ನು ಕುರಿತು ಆದ್ಯತೆಯಿಂದ- “ನಿಮಗೆ ರಾಜಕಾರಣದ ಸಂಗತಿಗಳೂ ಏನೂ ತಿಳಿಯುವುದಿಲ್ಲ. ನೀವು ನನ್ನ ವಿರುದ್ಧವಾಗಿ ಒಳಸಂಚು ನಡಿಸಿದ್ದಕ್ಕಾಗಿ ಈಗ ನಾನು ಬಾದಶಹನನ್ನು ಕರೆಸಿರುವದಿಲ್ಲ. ನಾಲೈದು ಜನ ಮುಸಲ್ಮಾನ ಬಾದಶಹರು ನಮ್ಮ ರಾಜ್ಯವನ್ನು ನುಂಗಲಿಕ್ಕೆ ಹೊಂಚುಹಾಕಿ ಕುಳಿತು ಕೊಂಡಿರುವದರಿಂದ ಅದರೊಳಗಿನ ಒಬ್ಬದೊಡ್ಡ ಬಾದಶಹನನ್ನು ನಮ್ಮ ಕಡೆಗೆ ಮಾಡಿ ಇಟ್ಟುಕೊಂಡಿರುವದು ನೆಟ್ಟಗೆಂದು ತಿಳಿದು, ಬಾದಶಹನನ್ನು ಕರೆಸಿದ್ದೇನೆ. ನಿಮ್ಮ ಒಳಸಂಚನ್ನು ಮುರಿಯುವ ಸಾಮರ್ಥ್ಯವು ನನ್ನಲ್ಲಿಲ್ಲೆಂದು ತಿಳಿಯಬೇಡಿರಿ. ನಿಮ್ಮನ್ನು ಸಾಲಗಿಡಕ್ಕೆ ತೂಗಹಾಕಿ ಕೊಲ್ಲಿಸುತ್ತಿದ್ದೆನು. ಇಲ್ಲವೆ ನೆಲದಲ್ಲಿ ಹುಗಿಸುತ್ತಿದ್ದನು. ವಿಜಯನಗರದ ಅಭಿಮಾನವು ನಿಮಗೇ ಇರುವದಿಲ್ಲ. ಆ ರಾಜ್ಯದ ವಿಷಯವಾಗಿ ನಿಮಗಿಂತ ಹೆಚ್ಚು ಅಭಿಮಾನವು ನಮಗಿರುತ್ತದೆ. ನಿಮ್ಮ ಸಂಚಿನ ಸಂಗತಿಗಳೆಲ್ಲ ನಮಗೆ ಗೊತ್ತಾಗಿರುವವು; ಆದರೆ ಮನೆಹೊಲಸು ತೆಗೆಯಲಿಕ್ಕೆ ಇದು ಸಮಯವಲ್ಲ. ಮೊದಲು ಹೊರಗಿನ ವೈರಿಗಳ ಸಮಾಚಾರವನ್ನು ತಕ್ಕೊಳ್ಳಬೇಕಾಗಿದೆ. ಈ ಮಾತು ನಿಮಗೆ ಹ್ಯಾಗೆ ತಿಳಿಯಬೇಕು. ಹೋಗಿರಿ, ನಿಮ್ಮ ಮೇಲೆ ನನ್ನ ಸಿಟ್ಟೂ ಇಲ್ಲ, ಲೋಭವೂ ಇಲ್ಲ. ನೀವು ನನ್ನ ಕಾಲು ಬೀಳಲಿಕ್ಕೆ ಬಂದದ್ದೇ ಸಾಕಾಯಿತು. ಇನ್ನು ನಾನು ನಿಮಗೆ ಹೆಚ್ಚಿಗೆ ಹೇಳುವುದಿಲ್ಲ. ಸುಮ್ಮನೆ ಇಲ್ಲದ ಚಿಂತೆಯಿಂದ ಕೊರಗಬೇಡಿರಿ, ನೋಡಿರಿ, ಇನ್ನು ಬಾದಶಹನನ್ನು ಹಾ ಹಾ ಅನ್ನುವದರೊಳಗೆ ಹ್ಯಾಗೆ ಹೊರಗೆ ಹಾಕುತ್ತೇನೆಂಬುದನ್ನು !”

ತಿರುಮಲನ ಈ ಮಾತುಗಳನ್ನು ಕೇಳಿ ಜನರು ಚಕಿತರಾದರು. ರಾಮರಾಜನಿಗೆ ಇನ್ನು ಏನು ಮಾತಾಡಬೇಕೆಂದು ತಿಳಿಯದೆ ಹೋಯಿತು.