ಈ ಪುಟವನ್ನು ಪ್ರಕಟಿಸಲಾಗಿದೆ
೧
ಕರಾವಳಿಯ ಯಕ್ಷಗಾನ
[ಮೂಲ, ಬೆಳವಣಿಗೆ, ಸ್ವರೂಪ, ವೈಶಿಷ್ಟ್ಯಗಳನ್ನು ಕುರಿತು]
೧
ಸಹ್ಯಾದ್ರಿಯನ್ನು ಮೇರೆಯಾಗಿರಿಸಿ, ಸ್ಕೂಲವಾಗಿ ಮೂಡಲಪಾಯ, ಪಡುವಲಪಾಯ1 ಎಂಬ ಎರಡು 'ಪಾಯ'ಗಳಿರುವ ಯಕ್ಷಗಾನವೆಂಬ ರಂಗಪ್ರಕಾರದ ಮೂಲ, ಕನ್ನಡದ ಬಹು ಚರ್ಚಿತ ಸಂಶೋಧನ ಸಮಸ್ಯೆಗಳಲ್ಲಿ ಒಂದು. ಭರತಮುನಿಯ ನಾಟ್ಯಶಾಸ್ತ್ರದಿಂದ ತೊಡಗಿ ರತ್ನಾಕರವರ್ಣಿಯ ಭರತೇಶವೈಭವದ ತನಕ 'ಯಕ್ಷ'ರಿಂದ ಹಿಡಿದು 'ಜಕ್ಕಣಿ'ಯ ವರೆಗೆ ಯಕ್ಷಗಾನದ ಮೂಲದ ಎಳೆಗಳನ್ನು ಗುರುತಿಸಲು ವಿದ್ವಾಂಸರು ಬಹುವಾಗಿ ಯತ್ನಿಸಿದ್ದಾರೆ. ಈಗಲೂ ಹೊಸ ಪುರಾವೆಗಳನ್ನು ಮಂಡಿಸುವ ಯತ್ನ ನಡೆಯುತ್ತಿದೆ. ಪುರಾವೆಗಳ, ಶಬ್ದ ಜಾಲಗಳ ಸಿಕ್ಕು ಸಿಕ್ಕಾದ ಗೊಂಡಾರಣ್ಯದಲ್ಲಿ ಇದೊಂದು ಯಕ್ಷಪ್ರಶ್ನೆ ಯಾಗಿ ಉಳಿದಿದೆ. ಯಕ್ಷಗಾನದ ಮೂಲದ ಕುರಿತು ಹಿರಿಯ ವಿದ್ವಾಂಸರು ಮಂಡಿಸಿರುವ ವಾದಗಳನ್ನು ಇಲ್ಲಿ ಸಂಕ್ಷೇಪವಾಗಿ ಸೂಚಿಸಿ, ನನ್ನ ಗಮನಕ್ಕೆ ಬಂದಿರುವ ಒಂದೆರಡು ವಿಷಯಗಳನ್ನು ಮುಂದಿಡುತ್ತೇನೆ.