ಈ ಪುಟವನ್ನು ಪ್ರಕಟಿಸಲಾಗಿದೆ

26/ ಕೇದಗೆ

ನಡೆಯುತ್ತದೆ. ಹಣ ಸಂಗ್ರಹ ಆಗಿದ್ದರೂ, ಪ್ರೇಕ್ಷಕರ ಸಂಖ್ಯೆ ಕಡಿಮೆ ಇರುವ ಆಟಗಳೆಷ್ಟೋ ಆಗುವುದಿದೆ. ಜನ ಹೊಸತನ್ನು ಬಯಸುತ್ತಾರೆ ಎಂಬ ಸಿದ್ದಾಂತವನ್ನು ತಾವೇ ತಯಾರಿಸಿ, ಅದನ್ನು ತಾವೇ ಜಾರಿಗೆ ತರುವ 'ಆಟ' ನಡೆಯುತ್ತದೆ.

ಹೊಸ ಪ್ರದರ್ಶನಗಳಿಗೆ ಬೇಕಷ್ಟು - ಬೇಡದಷ್ಟು ಪ್ರಸಂಗಗಳನ್ನು ಬರೆಯಬಲ್ಲ ಯಕ್ಷಗಾನ ಕವಿಗಳಿಗೆ ಕೊರತೆಯಿಲ್ಲ. ಪ್ರಸಂಗ ಬರೆಯುವುದೆಂದರೆ ಕತೆಯೊಂದನ್ನು ಪದ್ಯಗಳಲ್ಲಿ ಬರೆಯುವುದೆಂಬಷ್ಟಕ್ಕೆ ಸೀಮಿತವಾಗಿದೆ. ವಸ್ತು ಯಾವುದು, ಅದು ಯಕ್ಷಗಾನದ ವೇಷ, ನೃತ್ಯ, ಗಾನಗಳಿಗೆ ಹೊಂದಿರುವುದೇ ಹೇಗೆ? ಎಂಬ ಪ್ರಶ್ನೆಯನ್ನು ಪ್ರಸಂಗಕರ್ತನು ಉದ್ದೇಶಿಸುವುದಿಲ್ಲ.

ಯಕ್ಷಗಾನದ ಚೌಕಟ್ಟಿಗೆ ಹೊಂದಿಕೆಯಿಲ್ಲದ ಪ್ರಸಂಗಗಳನ್ನು ಬರೆಯುವುದಿಲ್ಲ ಎಂದು ಪ್ರಸಂಗಕರ್ತರು ನಿರ್ಧರಿಸಿದರೆ ಯಕ್ಷಗಾನದ, ಮುಖ್ಯವಾಗಿ ತೆಂಕುತಿಟ್ಟಿನ ರೂಪವಿನಾಶದ ಸಮಸ್ಯೆಯನ್ನು ಸುಲಭವಾಗಿ ಬಗೆಹರಿಸಬಹುದು. ಅಥವಾ ತಾನು ಬರೆದ ಪ್ರಸಂಗವನ್ನು ಯಕ್ಷಗಾನದ ಸಾಂಪ್ರದಾಯಿಕ ವೇಷ, ವಿಧಾನಗಳನ್ನಳವಡಿಸಿಯೇ ಪ್ರದರ್ಶಿಸಬೇಕು ಎಂಬ ನಿರ್ಬಂಧವನ್ನು ಹೇರುವ ಧೈರ್ಯವನ್ನು ಪ್ರಸಂಗಕಾರರು ತೋರಿದರೂ ಸಾಕು. ಅದು ಯಕ್ಷಗಾನಕ್ಕೆ ಅವರು ಮಾಡುವ ಬಲು ದೊಡ್ಡ ಐತಿಹಾಸಿಕವಾದ ಸ್ಮರಣೀಯ ಸೇವೆ ಆಗಬಹುದು. ಯಕ್ಷಗಾನದ ಹೆಸರಲ್ಲಿ ಜೀವನ ನಡೆಸುವ ಕಲಾವಿದರೇ ಇಂತಹ ಹಟ ತೊಟ್ಟರೆ ಬಹಳ ಉತ್ತಮ. ಕಲಾವಿದರಿಗೆ ವ್ಯವಸಾಯಿಕ ತೊಡಕು ಎಂದರೆ ಪ್ರಸಂಗಕರ್ತರಿಗೆ ಹಾಗೇನೂ ಇಲ್ಲ. ವ್ಯವಸಾಯಿ ಪ್ರಸಂಗಕರ್ತ ರೆಂಬವರು, ಅದರಿಂದಲೇ ಜೀವನನಿರ್ವಹಣೆ ಮಾಡುವವರು ಯಾರೂ ಇಲ್ಲ. ಈ ವಿವೇಕ ಪ್ರಸಂಗಕರ್ತರಿಗೆ ಬರಬೇಕು.

ಕಲಾವಿದರು, ಪ್ರಸಂಗಕರ್ತರು, ಪ್ರೇಕ್ಷಕರು, ಹಣ ಮಾಡುವ ದೃಷ್ಟಿಯಿಂದ ವ್ಯವಸಾಯನಿರತರಾಗಿರುವವರಿಂದ ಬಳಸಲ್ಪಡುತ್ತಿದ್ದಾರೆ. ಈ ಸ್ಥಿತಿ ಮಾಯವಾಗದೆ, ಕಲಾವಿದನಲ್ಲಿ, ಪ್ರಸಂಗ ಲೇಖಕನಲ್ಲಿ, ಪ್ರೇಕ್ಷಕನಲ್ಲಿ ಆತ್ಮ ಪ್ರತ್ಯಯ ಜಾಗೃತವಾಗದೆ, ಈ ಸ್ಥಿತಿ ಬದಲಾವಣೆ ಆಗಲಾರದು. ಅಂತಹ ಒಂದು ನಿಷ್ಠೆ ತೋರಿದ ಪ್ರಸಂಗಕರ್ತರೂ ಇದ್ದಾರೆ. ಅವರ ನಿಲುವು ಉಳಿದವರಿಗೆ ಮಾದರಿ ಆಗಬೇಕು. ದಾಕ್ಷಿಣ್ಯ, ಜನಪ್ರಿಯತೆಗಳಿಗೆ ಜಗ್ಗದೆ ದಿಟ್ಟ ನಿಲುವು ಅವರು ವಹಿಸಬೇಕು.

ವ್ಯಾವಹಾರಿಕ ಸೆಳೆತಗಳ ಮಧ್ಯೆ ಬರುವ ಆಕರ್ಷಣೆಗಳಿಗೆ ಒಳಗಾಗಿ, ತನ್ನ ಮೆಚ್ಚುಗೆಯನ್ನು ಹರಿಯಬಿಟ್ಟು, 'ಚೆನ್ನಾಗಿದೆ ವಾ ವಾ'! ಎನ್ನುವ ಪ್ರೇಕ್ಷಕ, ಅಭಿಮಾನಿ ಸಮೂಹ, ಸಲ್ಲದ್ದಕ್ಕೆ ಬೆನ್ನು ಚಪ್ಪರಿಸಿ, ಕಲಾವಿದನ ದಾರಿತಪ್ಪಿಸುತ್ತದೆ. ಎಲ್ಲ ಸಮಸ್ಯೆಗಳಿಗೂ ಕೊನೆಯ ಉತ್ತರ ಪ್ರೇಕ್ಷಕನ ಜಾಗೃತಪ್ರಜ್ಞೆಯೇ.