28/ ಕೇದಗೆ
ರಂಗಪ್ರಕಾರ ಎನ್ನುತ್ತಾರೆ. ಇದು ಕಲಾದೃಷ್ಟಿಯಿಂದಲೂ, ವ್ಯಾವಹಾರಿಕವಾಗಿಯೂ ವ್ಯವಸ್ಥಿತವಾಗಿ ಉಳಿದು ಬೆಳೆಯಬೇಕಾದರೆ ಸರಕಾರ ಈ ಬಗೆಗೆ ಏನಾದರೂ ಮಾಡಲೇಬೇಕು. ಕೆಲವೊಂದು ನಿರ್ಬಂಧಗಳ ಆಧಾರದಲ್ಲಿ ಸರಕಾರ ವ್ಯವಸಾಯ ಮೇಳಗಳಿಗೆ ಸಹಾಯಧನ - ಸಬ್ಸಿಡಿ - ನೀಡುವ ಯೋಜನೆಯೊಂದನ್ನು ರೂಪಿಸುವುದು ಆವಶ್ಯಕ. ಜನರಿಗೆ ಮನರಂಜನೆ, ಜನಶಿಕ್ಷಣಗಳನ್ನು ಇಷ್ಟೊಂದು ಬೃಹತ್ ಪ್ರಮಾಣದಲ್ಲಿ ನೀಡುತ್ತಿರುವ ಈ ರಂಗವನ್ನು ಆರೋಗ್ಯವಂತ, ಪುಷ್ಟವಾದ ವ್ಯವಸ್ಥೆಯಾಗಿ ಬೆಳೆಸುವಲ್ಲಿ ಸಹಾಯ ನೀಡುವುದು ಸರಕಾರದ ಕರ್ತವ್ಯ. ಸರಕಾರ ನೀಡುತ್ತಿರುವ ಪ್ರಶಸ್ತಿ, ಗೌರವಧನಗಳಗಿಂತಲೂ ಇದು ಮುಖ್ಯ ವಿಚಾರವಾಗಬೇಕು. ಇದರಿಂದ ಮೇಳಗಳ ಸಂಚಾಲಕರಿಗೆ ಹೆಚ್ಚಿನ ಭದ್ರತೆ ಒದಗುತ್ತದೆ. ಕಲೆಯ ಪರಂಪರೆಯ ಉಳಿವಿನ ಬಗ್ಗೆ ಗಮನ ಹರಿಸಲು ಸಾಧ್ಯವಾಗುತ್ತದೆ. ಸರಕಾರಕ್ಕೂ ಕಲಾವಿದರ ಸೌಲಭ್ಯಗಳ ಬಗ್ಗೆ, ಸಂಪ್ರದಾಯಶುದ್ಧ ಕಲೆಗಳ ರಕ್ಷಣೆಯ ಬಗ್ಗೆ, ಮೇಳಗಳ ಮೇಲೆ ನಿರ್ಬಂಧ ಹೇರಲು ಸಾಧ್ಯವಾಗುತ್ತದೆ.
ಗೊಂಬೆಯಾಟದಂತಹ ತಂಡಗಳಿಗೆ ನಿಶ್ಚಿತ ಸಂಖ್ಯೆಯ ಪ್ರದರ್ಶನಗಳನ್ನು ನಿಶ್ಚಿತ ಸ್ಥಳಗಳಲ್ಲಿ ನೀಡಬೇಕೆಂಬ ಆಧಾರದಲ್ಲಿ ಸಹಾಯಧನ ನೀಡಿ ಪೋಷಣೆ ಕೊಡಬಹುದು. ಶಾಲೆ, ಕಾಲೇಜುಗಳು ಗೊಂಬೆಯಾಟ ಪ್ರದರ್ಶನಗಳಿಗೆ ಸೂಕ್ತ ವೇದಿಕೆಗಳಾಗಬಹುದು.ಗೊಂಬೆಯಾಟವನ್ನು ಮಕ್ಕಳ ರಂಗಭೂಮಿ ಎಂದು ಅಧಿಕೃತವಾಗಿ ಘೋಷಿಸಿ ಸರಕಾರ ವಿದ್ಯಾ ಇಲಾಖೆ ಮೂಲಕವೇ ಅದಕ್ಕೆ ಸೂಕ್ತವಾದ ಏರ್ಪಾಡು ಮಾಡುವುದು ಸಾಧ್ಯ. ಇದು ವ್ಯಾವಸಾಯಿಕ ಬಾಧ್ಯತೆ ಒದಗಿಸುವ ಒಳ್ಳೆಯ ವ್ಯವಸ್ಥೆ ಆಗುತ್ತದೆ.