ಈ ಪುಟವನ್ನು ಪ್ರಕಟಿಸಲಾಗಿದೆ

30/ ಕೇದಗೆ

ಪ್ರಸಂಗದ ಪದ್ಯಗಳು ಇಡಿಯಾಗಿ ಯಾ ಬಿಡಿಯಾಗಿ, ನಾವು ಸಾಮಾನ್ಯಾರ್ಥದಲ್ಲಿ ಹೇಳುವ ಕಾವ್ಯಗುಣವನ್ನು ಹೊಂದಿದ್ದರೆ ಸಾಲದು, ಅಥವಾ ಹಾಗೆ ಹೊಂದಿರುವುದು ಮುಖ್ಯವೂ ಅಲ್ಲ. ಅದರಲ್ಲಿ ರಂಗಸ್ಥಳಕ್ಕೆ ಪ್ರಸ್ತುತವೆನಿಸುವ ಗುಣಗಳಿರುವುದು ಮುಖ್ಯ. ಅದರ ವಸ್ತು ಮತ್ತು ಕಥೆ ಯಕ್ಷಗಾನದ ರಂಗಭೂಮಿಯ ಸ್ವಭಾವಸ್ವರೂಪಗಳಿಗೆ ಹೊಂದಿಕೆಯಾಗಿರುವುದೂ ಅಷ್ಟೆ (ಅಲ್ಲ ಅದಕ್ಕಿಂತ ಹೆಚ್ಚು) ಮುಖ್ಯ. ಗೇಯತೆ, ಸರಳತೆ, ನಾಟಕೀಯತೆ, ಕಥಾವಸ್ತುವಿನ ಯೋಗ್ಯತೆ, ಬಂಧಗಳ ವೈವಿಧ್ಯ, ವಿಷಯವನ್ನು ಸಂಗ್ರಹವಾಗಿ ಹೇಳುವ ಗುಣ ಇವುಗಳ ಮೂಲಕ ಪ್ರಸಂಗವು ನರ್ತಕ, ಹಿಮ್ಮೇಳಗಾರ, ಅರ್ಥಧಾರಿ ಈ ಮೂವರಿಗೂ ಸೂಕ್ತವಾದ ಪ್ರೇರಣೆ, ಪೋಷಣೆಗಳನ್ನು ನೀಡಬೇಕು. ರಂಗಸ್ಥಳದ ಕ್ರಿಯೆಗೆ ಪ್ರಸಂಗವೇ ಕೇಂದ್ರವಾದುದರಿಂದ ಆಟದ ಯಶಸ್ಸು ಪ್ರಸಂಗದ ವಸ್ತು ಮತ್ತು ರಚನೆಗಳನ್ನು ಬಹುವಾಗಿ ಅವಲಂಬಿಸುತ್ತದೆ.

ಪ್ರಸಂಗದ ಹಾಡುಗಳು, ಹಾಡುಗಳಾಗಿ ಸಾಫಲ್ಯ ಪಡೆಯಬೇಕಾದುವು. ಅವು ಕ್ಲಿಷ್ಟವಾದ ರಚನೆ ಆಗಿರಬಾರದು. ಕೇಳುಗನ ಕಿವಿಗಿಳಿಯುತ್ತಲೇ ಪರಿಣಾಮವನ್ನು ಉಂಟುಮಾಡಬೇಕಾದ ಸಾಹಿತ್ಯ ಇದಾದುದರಿಂದ ಗೇಯತೆ,ಸರಳತೆಗಳು, ಇಲ್ಲಿ ಪ್ರಧಾನ ಗುಣಗಳಾಗಿ ಪರಿಗ್ರಾಹ್ಯ ಅಂಶಗಳು. ಈ ಗುಣಗಳನ್ನು ಉಳಿಸಿಕೊಂಡು, ಉತ್ತಮ ರಂಗಕಾವ್ಯವನ್ನು ಉಂಟುಮಾಡುವುದು ಸುಲಭವಲ್ಲ. ಈ ಕೆಲಸವನ್ನು ಸಮತೋಲದಿಂದ ತುಂಬ ಯಶಸ್ವಿಯಾಗಿ ಸಾಧಿಸಿದ ಕವಿಗಳನ್ನು ಯಕ್ಷಗಾನ ಸಾಹಿತ್ಯದ ಇತಿಹಾಸದುದ್ದಕ್ಕೂ ಕಾಣುತ್ತೇವೆ. ದೇವಿದಾಸನ ಕೃಷ್ಣ ಸಂಧಾನ, ಪಾರ್ತಿಸುಬ್ಬನ ಪ್ರಸಂಗಗಳು, ಪಾಂಡೇಶ್ವರ ವೆಂಕಟನ ಕರ್ಣಾರ್ಜುನ, ವಿಷ್ಣು ಕವಿಯ ವಿರಾಟಪರ್ವ, ಧ್ವಜಪುರ ನಾಗಪ್ಪಯ್ಯನ ಚಂದ್ರಾವಳೀವಿಲಾಸ ಮುಂತಾದ ಪ್ರಸಂಗಗಳು ಬಿಡಿಪದ್ಯಗಳ ಮತ್ತು ಇಡಿಯ ರಚನೆಯ ಮಟ್ಟದಲ್ಲಿ ಉತ್ಕೃಷ್ಟ ಮಾದರಿಗಳನ್ನು ಹೊಂದಿವೆ. ಇಂದು ಪ್ರಸಂಗಗಳನ್ನು ಬರೆಯುತ್ತಿರುವ ಹಲವರು ರಂಗಸ್ಥಳದ ದೃಷ್ಟಿಯಿಂದ ಉತ್ಕೃಷ್ಟ ರಚನೆಗಳನ್ನು ನೀಡಿದ್ದಾರೆ.

ಪ್ರಸಂಗವೆಂಬುದು ಯಕ್ಷಗಾನಕ್ಕೆ ಎಲ್ಲ ಅರ್ಥಗಳಲ್ಲಿ ಒದಗಿ ಬರಬೇಕು. ಗಾನಕ್ಕೆ ಒದಗುವ ರಚನೆಯಲ್ಲಿ ವಸ್ತು, ಭಾವ, ಭಾಷೆಗಳು ಗಾನಗಂಧಿಯಾಗಿ ಸೇರಿಬರಬೇಕು. ಬರಿಯ ಪದಶಕ್ತಿಯನ್ನೆ ಆಧರಿಸಿದ ಅಭಿವ್ಯಕ್ತಿ ಅದಲ್ಲ.* ಗಾನದ ಮೂಲಕ ರಂಜನವನ್ನೂ, ಪರಿಣಾಮವನ್ನೂ ಉಂಟುಮಾಡುವ ಪದ ಸಂಯೋಜನೆ ಅದರಲ್ಲಿರಬೇಕು. ಈ ಅರ್ಥದಲ್ಲಿ ಪ್ರಸಂಗಕರ್ತನು ಉತ್ತಮ


* ಇದೇ ವಿಚಾರದ ವಿಸ್ತ್ರತ ವಿವೇಚನೆಯನ್ನು ಡಾ| ಶಿವರಾಮ ಕಾರಂತರು ಯಕ್ಷಗಾನ ಬಯಲಾಟ, 1957 ರಲ್ಲಿ "ಬರೆದ ಪದ್ಯ, ಆಡುವ ಗದ್ಯ" ಪರಿಚ್ಛೇದದಲ್ಲಿ ಮಾಡಿದ್ದಾರೆ.