ಈ ಪುಟವನ್ನು ಪ್ರಕಟಿಸಲಾಗಿದೆ

34/ ಕೇದಗೆ

ವೈಧರ್ಮ್ಯ (Contrast) ವನ್ನು ತೋರಿಸುವ ಹಾಗೆ ರಚಿಸಿದುದನ್ನು ಕಾಣ ಬಹುದು. ಕಾವ್ಯಗಳಲ್ಲಿ ದೃಶ್ಯ, ಶ್ರವ್ಯ ವಿಭಾಗವಿರುವುದನ್ನೂ ನಾಟಕಗಳಲ್ಲಿ ಕೂಡ ಆಡುವ ಮತ್ತು ಓದುವ ನಾಟಕಗಳೆಂದು ವಿಭಾಗಿಸುವುದನ್ನೂ ಇಲ್ಲಿ ನೆನಪಿಸಬಹುದು.

ಪ್ರಸಂಗವೊಂದು ರಂಗದಲ್ಲಿ ಯಶಸ್ವಿ ಅನಿಸಬೇಕಾದರೆ ಅದರ ವಸ್ತು ಸಾರ್ವತ್ರಿಕ ಸ್ಪಂದನವನ್ನು ಮೂಡಿಸುವ ಗುಣವುಳ್ಳದ್ದಾಗುವುದರ ಜತೆಗೆ ಕತೆಯ ನಡೆಯಲ್ಲಿ ಘಟನಾವಳಿಗಳು, ಭಾವಪರಿವರ್ತನ, ಪಾತ್ರಗಳ ಬೆಳವಣಿಗೆಗೆ ಬೇಕಾದ ಪೋಷಕ ಸನ್ನಿವೇಶ ಮತ್ತು ಪ್ರಸಂಗದ ಪ್ರಧಾನ ಧ್ವನಿಯೂ, ಸಂದೇಶ ವನ್ನು ಅಭಿವ್ಯಕ್ತಿಸುವ ಸೂತ್ರ—ಇವೆಲ್ಲ ಸಪ್ರಮಾಣವಾಗಿ ಸೇರಿಬರಬೇಕು. ಮಂಡಿಸಬೇಕಾಗಿರುವ ವಸ್ತು ಹಿಂದಾಗಿ, ದೃಶ್ಯಗಳು ಹಿಗ್ಗುತ್ತ ಹೋದರೆ ಪ್ರಸಂಗದ ಮುಖ್ಯ ಶರೀರ ಸೊರಗಿ ಹೋಗುತ್ತದೆ. ಹಲಸಿನಹಳ್ಳಿಯವರ ವಿದ್ಯುನ್ಮತೀಕಲ್ಯಾಣ ಪ್ರಸಂಗ ಇಂತಹ ವಿದ್ಯಮಾನಕ್ಕೆ ಒಂದು ದೃಷ್ಟಾಂತ. ಇದಕ್ಕೆ ವ್ಯತಿರಿಕ್ತವಾಗಿ 'ಪಂಚವಟಿ'ಯನ್ನು ಉದಾಹರಿಸಬಹುದು. ರಾಮನ ಪ್ರವೇಶ, ಋಷಿಗಳ ದೂರು, ಬಳಿಕ ಶೂರ್ಪನಖಿಯ ಪ್ರವೇಶ, ನಾಸಾಚ್ಛೇದ, ಖರವಧೆ, ಸೀತಾಪಹಾರ—ಹೀಗೆ ಎಲ್ಲ ಹಂತಗಳಲ್ಲೂ ಕತೆಯ ನಡೆ, ದೃಶ್ಯ ವಿಭಾಗ, ಪದ್ಯಗಳ ಸಂಖ್ಯೆ, ಪಾತ್ರಗಳ ಪ್ರವೇಶ—ಎಲ್ಲ ದೃಷ್ಟಿಗಳಿಂದಲೂ ಪ್ರಸಂಗ ಕುತೂಹಲಕರವಾಗಿಯೂ, ಅಚ್ಚುಕಟ್ಟಾಗಿಯೂ ರಚಿತವಾಗಿದೆ. ನಾಟಕವೊಂದಕ್ಕೆ ಇರಬೇಕಾದ ಅಂಗಗಳು ಇಲ್ಲಿ ಸೇರಿ ಬಂದಿರುವುದಲ್ಲದೆ, ಯಕ್ಷಗಾನದ ವೇಷವೈವಿಧ್ಯಕ್ಕೂ ಅವಕಾಶವಿದೆ, ರಸವೈವಿಧ್ಯವೂ ಇದೆ.

ನಳದಮಯಂತಿ, ಹರಿಶ್ಚಂದ್ರ, ಕಾರ್ತವೀರ್ಯ—ಇಂತಹ ಕತೆಗಳು ಮನಸ್ಸಿಗೆ ಮುಟ್ಟುವುದು ಅವುಗಳಿಗಿರುವ ಸಾರ್ವತ್ರಿಕ ಭಾವದಿಂದಾಗಿ, ನಳದಮಯಂತಿಯ ವಸ್ತು—ಪ್ರಣಯ, ಪ್ರಾಮಾಣಿಕತನ, ನಿಷ್ಠೆ, ವಿಯೋಗ, ಪುನಃ ಸುಖಪ್ರಾಪ್ತಿ ಇವುಗಳ ಚಕ್ರ ವಿಶ್ವವ್ಯಾಪಿ, ಕಾರ್ತವೀರ್ಯನ ಕತೆಯಾಗಲಿ, ನಳನ ಕತೆಯಾಗಲಿ ನಮಗೆ ತಿಳಿಯಬೇಕಾದರೆ, ಭಾರತೀಯ ಪೌರಾಣಿಕ ಪರಂಪರೆಯ ಅರಿವಾಗಲಿ, ಪೌರಾಣಿಕ ಸಮಯಗಳ* ಜ್ಞಾನವಾಗಲಿ ಬೇಕಿಲ್ಲ. ಒಬ್ಬ ರಾಜ, ಅವನ ವಿಹಾರಕ್ಕೆ ರಾಕ್ಷಸನೊಬ್ಬನಿಂದ ಅಡ್ಡಿ, ಯುದ್ಧ, ಮತ್ತೆ ಧೇನುವಿನ ಪ್ರಕರಣ, ಯುದ್ಧ, ಮರಣ—ಇವಿಷ್ಟು ಕಾರ್ತವೀರ್ಯನ ಕತೆಯ ಹಂದರ. ಕರ್ಣಪರ್ವ ಗದಾಪರ್ವಗಳು ನಮಗೆ ಮನಸ್ಸಿಗೆ ಇಳಿಯಬೇಕಾದರೆ ಮಹಾಭಾರತದ ಹಿನ್ನೆಲೆ ಮುನ್ನೆಲೆಗಳ


* 'ಸಮಯ' ವೆಂದರೆ ಪೂರ್ವನಿಶ್ಚಿತವಾದ ಪಾರಂಪರಿಕ ಕಲ್ಪನೆ ಅಥವಾ ಸಹೃದಯನಿಗೂ ಕಥನಕಾರನಿಗೂ ಇರುವ ಒಂದು ಒಪ್ಪಂದದ ಹಾಗೆ.