ಈ ಪುಟವನ್ನು ಪ್ರಕಟಿಸಲಾಗಿದೆ
ಪ್ರಸಂಗರಚನೆ : ರಂಗದೃಷ್ಟಿ 39

ವೈರದ ಕತೆ ನಾಲ್ಕು ನಾಲ್ಕು ಬಾರಿ ಬರುತ್ತದೆ, ಬರಲೇಬೇಕಾಗುತ್ತದೆ. ಪ್ರಸಂಗದಲ್ಲಿ ಅದು ಎಲ್ಲೂವಿಸ್ತಾರವಾಗಿ ಬಂದಿಲ್ಲ ಎಂಬುದು ಪಾರ್ತಿಸುಬ್ಬನ ರಂಗದೃಷ್ಟಿಗೆ ಉಜ್ವಲ ನಿದರ್ಶನ.

ಯಕ್ಷಗಾನ ಬಯಲಾಟಗಳ ಸಂಪ್ರದಾಯದಲ್ಲಿ ಪೂರ್ವರಾತ್ರಿಯ ಪ್ರಸಂಗಗಳು ಮತ್ತು ಉತ್ತರರಾತ್ರಿಯ ಪ್ರಸಂಗಗಳು ಎಂಬ ಒಂದು ಸಂಕೇತ ಪ್ರಚಲಿತವಿದೆ. "ಇದು ಮೊದಲ ಭಾಗಕ್ಕೆ ಉತ್ತಮ" "ಈ ಪ್ರಸಂಗ ಬೆಳಗಿನ ಜಾವಕ್ಕೆ ಹೇಳಿಸಿದ್ದು" ಎಂಬ ಮಾತುಗಳನ್ನು ಯಕ್ಷಗಾನವಲಯದಲ್ಲಿ ನಾವು ಕೇಳುತ್ತೇವೆ. ಅಂತಹ ವಿಭಾಗವನ್ನು ನಾವು ಈಗ ಅನುಸರಿಸುತ್ತಿಲ್ಲ, ಬೇರೆ ಬೇರೆ ಕಾರಣಗಳಿಂದ ಹೀಗಿದೆ, ಇರಲಿ. ಆದರೆ, ಅಂತಹದೊಂದು ಕಲ್ಪನೆ ನಿರಾಧಾರವೆನ್ನುವಂತಿಲ್ಲ. ಆ ಸಂಕೇತಕ್ಕೂ ಒಂದು ಅರ್ಥವಿಲ್ಲದಿಲ್ಲ. ಅಪರರಾತ್ರಿಯ ಪ್ರಸಂಗಗಳೇನೋ ಪೂರ್ವರಾತ್ರಿಯಲ್ಲಿ ರಂಜಿಸಬಹುದು. ಆದರೆ, ಪೂರ್ವರಾತ್ರಿಯ ಪ್ರಸಂಗಗಳು ಉತ್ತರಭಾಗಗಳಾಗಿ ಮೆರೆದು ಕಾಣುವುದಿಲ್ಲ. ಕೃಷ್ಣ ಸಂಧಾನದ ಪೂರ್ವಾರ್ಧವಾದ ಶ್ರೀಕೃಷ್ಣ ಸಾರಥ್ಯ ಸ್ವೀಕಾರದ ಭಾಗ, ಮಾಗಧವಧೆ, ಅಂಗದಸಂಧಾನದ ಪೂರ್ವಾರ್ಧ, ಕೃಷ್ಣಜನ್ಮ - ಮುಂತಾದ ಭಾಗಗಳು ಪೂರ್ವರಾತ್ರಿಗೇ ಸೂಕ್ತವಾದವುಗಳು. ಒಂದು ಪ್ರಸಂಗವನ್ನು ರಚಿಸುವಾಗ, ಅದರ ಸಮಗ್ರವಾದ ನಡೆ, ಘಟನಾವಳಿಗಳಿಗೆ ಸಂಬಂಧಿಸಿ ಈಯೊಂದು ವಿಚಾರವನ್ನು ಕವಿಯು ಗಮನದಲ್ಲಿರಿಸಿ ಕೊಳ್ಳಬೇಕು. ಪೂರ್ಣಾವಧಿಯ ಆಟವನ್ನು ನೋಡುವ ಪ್ರೇಕ್ಷಕನ ಮನಃಸ್ಥಿತಿಯನ್ನು ಅಲಕ್ಷಿಸುವಂತಿಲ್ಲ.

ಒಟ್ಟಿನಲ್ಲಿ ರಂಗವನ್ನು ದೃಷ್ಟಿಯಲ್ಲಿರಿಸಿ ರಚಿತವಾಗುವ ಪ್ರಸಂಗಕ್ಕೆ ಇರ ಬೇಕಾದ ಮುಖ್ಯ ಗುಣಗಳು ಇವು:

  1. ಗಾನನೃತ್ಯಗಳಿಗೊಪ್ಪುವ ರಚನಾವಿಧಾನ.
  2. ಅರ್ಥಧಾರಿಯ ಕಲ್ಪನೆಗೆ, ವಿಸ್ತಾರಕ್ಕೆ ಇಂಬು ನೀಡುವ ಕ್ಷಮತೆ.
  3. ತಾಳ, ಬಂಧಗಳ ವೈವಿಧ್ಯಪೂರ್ಣವಾದ ಉಚಿತವಾದ ಆಯ್ಕೆ.
  4. ಪಾತ್ರಗಳ ಪ್ರವೇಶ, ಸಂವಾದಗಳಿಗೆ ಅನುಕೂಲಿಸುವ ಪದ್ಯಗಳ ವ್ಯವಸ್ಥೆ.
  5. ನಾಟಕೀಯವಾದ ಘಟನಾವಳಿ, ರಸವೈವಿಧ್ಯ.
  6. ಪಾತ್ರ ವೈವಿಧ್ಯ, ಯಕ್ಷಗಾನದ ವಿವಿಧ ವೇಷಗಳು ಬರುವಂತಹ ಅವಕಾಶ.
  7. ಕತೆಯ ಬೆಳವಣಿಗೆಯಲ್ಲಿ ಒಂದು ಕ್ರಮ: ಬೀಜ, ಅಂಕುರ, ಪ್ರತಿಮುಖ ಮುಂತಾದ ಪ್ರಾಚೀನಸಿದ್ಧಾಂತಕ್ಕೆ ಸಂವಾದಿಯಾದ ಸ್ಥಿತಿ.
  8. ಕತೆಗೆ ಒಂದು ಪ್ರಧಾನ ಆಶಯ, ಅದಕ್ಕೆ ಸಂವಾದಿಯಾಗಿ ಪಾತ್ರಗಳ ಬೆಳವಣಿಗೆ.