ಈ ಪುಟವನ್ನು ಪ್ರಕಟಿಸಲಾಗಿದೆ

52/ ಕೇದಗೆ

ಒಂದೊಂದು ಪ್ರದರ್ಶನವೂ ನಿಜಕ್ಕೂ ಭಿನ್ನ ವಿನ್ಯಾಸದ ರಂಗಕೃತಿ. ಕೃಷ್ಣ ಸಂಧಾನದಂತಹ ಪ್ರಸಂಗಗಳು ಎಷ್ಟೇ ಪ್ರದರ್ಶನಗಳನ್ನು ಕಂಡಾಗಲೂ ಹಳತೆನಿಸದವುಗಳು. ಆ ಪ್ರಸಂಗದ ವಸ್ತುವಿನ ಶಕ್ತಿ ಮಾತ್ರವಲ್ಲ ತಾಳಮದ್ದಲೆ ಎಂಬ ಪ್ರಕಾರದ ಶಕ್ತಿ ಕೂಡ.

ಅರ್ಥಧಾರಿ ಹಲವು ಸೆಳೆತಗಳ ಮಧ್ಯೆ ಕೆಲಸ ಮಾಡುತ್ತಾನೆ. ಗದ್ಯಪದ್ಯಗಳ ನಡುವಿನ ಸೆಳೆತ (Tension). ಆಧುನಿಕ ಪ್ರಾಚೀನಗಳ ನಡುವಿನ ಸೆಳೆತ. ಸ್ವತಂತ್ರ ಆಶುಭಾಷಣ ಪ್ರಸಂಗದ ಬಂಧಗಳ ಸೆಳೆತ. ಪುರಾಣಲೋಕ ನಿಜಲೋಕಗಳ ನಡುವಿನ ಸೆಳೆತಗಳಿವೆ. ಜನಪ್ರಿಯತೆಯ ರಂಜಕತೆಗೆ ಒಲಿಯುವ ಕ್ಷಣಕ್ಷಣಕ್ಕೂ ಇರುವ ಮಾಧ್ಯಮ ಇದು. ಈ ಮಧ್ಯೆ ಪಾತ್ರ ಪಾತ್ರವೇ ಆಗಿರಬೇಕಾದ ಒತ್ತಡ ಇದೆ. ಭಾಷೆ, ಶೈಲಿಗಳ ಬಳಕೆಯ ಪ್ರಶ್ನೆ ಅವನ ಮುಂದಿದೆ. ಭಕ್ತಿಯುಗದ ಕನ್ನಡ ಕಾವ್ಯ ಮತ್ತು ಪ್ರಸಂಗಗಳ ಆಶಯದಿಂದಾಚೆ ಚಾಚಿ ಸಂಸ್ಕೃತ ಕಾವ್ಯಗಳ ಹೆಚ್ಚು ಮಾನವನಿಷ್ಠಲೋಕದ ಚಿತ್ರಣದ ಸವಾಲು ಇದೆ. ವಾಖ್ಯಾನ ಸೃಷ್ಟಿ ಕಾರ್ಯಗಳ ಸಮತೋಲ ಸಾಧಿಸಬೇಕಾದ ಕೆಲಸ ಇದೆ. ವಾದ - ಸಂವಾದಗಳ ಇತಿಮಿತಿಗಳ ಪ್ರಶ್ನೆ ಇದೆ. ಇವುಗಳ ಮಧ್ಯೆ ದುಡಿಯುತ್ತ ಹೊಸ ಅರ್ಥಭಾವಗಳತ್ತ, ತುಡಿಯುತ್ತ ಮುಂದುವರಿಯುವುದೇ ತಾಳಮದ್ದಲೆಯ ಅರ್ಥಗಾರಿಕೆಯ ನಿಜಧರ್ಮ.

ಅರ್ಥಗಾರಿಕೆಗೆ ಹೊಸಮುಖ ಮೂಡಬೇಕಾದರೆ ಈಗಾಗಲೇ ಬಳಸಿರುವ ಪ್ರಸಂಗಗಳ ಜತೆ ಹೆಚ್ಚು ವೈವಿಧ್ಯ ಮತ್ತು ಸಂಕೀರ್ಣತೆಗಳುಳ್ಳ ವಸ್ತುಗಳ ಪ್ರಸಂಗಗಳು ರಚನೆಗೊಂಡು ಪ್ರಯೋಗಗೊಳ್ಳಬೇಕು. ವೇಷನೃತ್ಯಗಳ ಬಣ್ಣದ ಆವರಣ ಇಲ್ಲದ ಈ ಕಲೆಗೆ ಹೆಚ್ಚಿನ ಸ್ವಾತಂತ್ರವೂ ಪ್ರಯೋಗಸಾಧ್ಯತೆಯೂ ಇದೆ. ಸಾಹಿತ್ಯವು ಮಾತಾಗಿ ಮಾತು ಕಲೆಯಾಗಿ ಪ್ರಸಂಗದ ಅರ್ಥ ಮಾತುಗಾರಿಕೆಯನ್ನಾಧರಿಸಿದ ರಂಗಭೂಮಿಯಾಗಿ ರೂಪುಗೊಳ್ಳುವ ಈ ಕಲೆ ವಿಸ್ತರಣ, ನವೀನ ಪ್ರಯೋಗಗಳ ಆಹ್ವಾನವನ್ನು ಕಲಾವಿದರ ಮುಂದಿಟ್ಟಿದೆ.
—--ದಕ್ಷಿಣಕನ್ನಡಿಗರ ಸಂಘ, ಬೆಂಗಳೂರು ಇದರ ಸಂಚಿಕೆಗಾಗಿ ಬರೆದ ಲೇಖನ 1986

ಇದರಲ್ಲಿ ಬಂದಿರುವ ಒಂದೆರಡು ವಿಚಾರಗಳಿಗೆ ಶ್ರೀ ಪ್ರಸನ್ನ ಅವರ “ನಾಟಕ
ರಂಗಕೃತಿ* (ಅಕ್ಷರ ಪ್ರಕಾಶನ, ಸಾಗರ 1986) - ಇದರ ಪ್ರೇರಣೆ ಇದೆ.