54/ ಕೇದಗೆ
ಏನು, ವಸ್ತು ತಂತ್ರಗಳ ದೃಷ್ಟಿಯಲ್ಲಿ ಅದರ ಸ್ವರೂಪ - ಸ್ವಭಾವಗಳೇನು ಎಂಬುದನ್ನು ಅದರ ವಿವಿಧ ಅಂಗಗಳ ಮಗ್ಗುಲುಗಳ ನೆಲೆಯಲ್ಲಿ ಅಭ್ಯಸಿಸುವುದು ಅವನ ಮೊದಲ ಕೆಲಸ, ಅಂತಹ ಒಂದು ಪರಂಪರೆ ಅಥವಾ 'ಮಾರ್ಗ' ವನ್ನು ಉಳಿಸಿಕೊಂಡು ತಾನು ಈ ಮಾಧ್ಯಮದಲ್ಲಿ ಏನು ಮಾಡಬಹುದು, ಏನು ಮಾಡಬೇಕು ಎಂಬುದನ್ನು ಅವನು ಯೋಚಿಸಬೇಕು. ಯೋಚಿಸುತ್ತಾನೆ. ಸೃಜನಶೀಲನಿಗೆ ಪ್ರಯೋಗ (experimental) ಶೀಲದೃಷ್ಟಿ ಧೋರಣೆಗಳು ಮುಖ್ಯ. ಕೇವಲ ಜನಪ್ರಿಯತೆಯ ಸೆಳವಿಗೆ ಸಿಕ್ಕದೆ. ಅಪ್ರಿಯನಾಗುವ ರಿಸ್ಕ್ ತೆಗೆದುಕೊಂಡು ಸಹ ಅವನು ಹೊಸ ದಾರಿಗಳನ್ನು ಕಂಡುಕೊಳ್ಳ ಬೇಕಾಗುತ್ತದೆ. ಈಗಾಗಲೇ ಜನರ ಮನಸ್ಸಿಗೆ ಒಗ್ಗಿರುವ ಪದ್ಧತಿಯನ್ನೇ ಆಶ್ರಯಿಸಿ ಅಭಿವ್ಯಕ್ತಿಸುವ ಸರಳವಾದ ಮಾರ್ಗವನ್ನು ಬಿಟ್ಟು ತನ್ನ ಮಾಧ್ಯಮವನ್ನು ತನ್ನ ಮನಸ್ಸಿನ ಅಭಿವ್ಯಕ್ತಿಯ ಸಾಧನವಾಗಿ ಅವನು ಬೆಳೆಸುತ್ತಾನೆ,ಇಂತಹವರಿಂದಲೇ ಕಲೆ ಬೆಳೆಯುವುದು. ಆದರೆ ಇಂತಹ ಪ್ರಯೋಗಾತ್ಮಕತೆ ಪರಂಪರೆಯ ಮುಂದುವರಿಕೆಯಾಗಿಯೇ ಇರುವಂತಹುದು. ವಿಶೇಷತಃ ಸಾಂಪ್ರದಾಯಿಕ (Classical, traditional) ಮಾಧ್ಯಮಗಳ ಸಂದರ್ಭದಲ್ಲಿ ಬಹುಮುಖ್ಯವಾದಸಂಗತಿ. ಆಧುನಿಕ ಕವಿತೆ, ನಾಟಕ ಮುಂತಾದುವುಗಳಿಗೆ, ಇರುವ ಮುಕ್ತವಾದ ಸೃಜನಸ್ವಾತಂತ್ರ ಸಾಂಪ್ರದಾಯಿಕ ಕಲೆಗಳಿಗೆ ಇಲ್ಲ. ವರ್ತಮಾನದಲ್ಲಿ ವ್ಯವಹರಿಸುತ್ತ ಸುತ್ತಣ ಸಮಾಜಕ್ಕೆ ಇಡಿಯಾಗಿ ಪ್ರತಿಸ್ಪಂದಿಸುತ್ತ, ತಾನು ಹೇಳಬೇಕಾಗಿರುವುದನ್ನು ಆಧುನಿಕ ಸನ್ನಿವೇಶಕ್ಕೆ ಸಮಗ್ರವಾಗಿ ಹೊಂದಿಕೆಯಾಗುವ ಅವಕಾಶ ಸಮಕಾಲೀನ ಸಾಹಿತ್ಯ, ಕಲೆಗಳಿಗೆ ಇದೆ. ಈ ಸ್ಥಿತಿ ಸಾಂಪ್ರದಾಯಿಕ ಕಲೆಗಳದಲ್ಲ. ವಸ್ತು, ಭಾಷೆ, ತಂತ್ರ, ಮೌಲ್ಯ ಇವೆಲ್ಲವುಗಳಲ್ಲೂ ಅಲ್ಲಿ ಕೆಲವು ಬಂಧನಗಳಿವೆ, ಆದರೂ ಪ್ರತಿಭಾಸಮೃದ್ಧಿ ಇರುವ ಮನಸ್ಸು, ಪರಂಪರೆ ಒಡ್ಡುವ ಮಿತಿಗಳ ನಡುವೆಯೂ, ಅದ್ಭುತಗಳನ್ನು ಸಾಧಿಸಬಲ್ಲುದು ಎಂಬುದನ್ನು ಸಂಗೀತದಲ್ಲಿ ರವಿಶಂಕರ, ಬಾಲಮುರಳೀಕೃಷ್ಣ ಮುಂತಾದವರೂ, ನೃತ್ಯದಲ್ಲಿ ಪದ್ಮಾಸುಬ್ರಹ್ಮಣ್ಯಂರಂತಹವರೂ, ಅರ್ಥಗಾರಿಕೆಯ ಮಾಧ್ಯಮದಲ್ಲಿ ಶೇಣಿ, ಸಾಮಗರಂತಹವರೂ ತೋರಿಸಿಕೊಟ್ಟಿದ್ದಾರೆ. ಪ್ರಯೋಗಶೀಲತೆ ಸಫಲವಾಗ ಬೇಕಾದರೆ, ಅದರಲ್ಲಿ ಬಲಿಷ್ಠವಾದ ಸಂವಹನಕ್ಷಮತೆ ಇರಬೇಕು. ತಾನು ತೋರಿಸಲಿರುವ 'ಹೊಸತ' ನ್ನು ಜನರ ಮನಸ್ಸಿಗೆ ತಲಪಿಸಬಲ್ಲ ಮೊನಚು ಇರಬೇಕು, ಜತೆಗೆ ಪ್ರಯೋಗವನ್ನು ಸ್ವೀಕರಿಸುವ ಮುಕ್ತ ಸಹೃದಯರಾದ ಸಾಮಾಜಿಕರೂ ಗಣನೀಯ ಪ್ರಮಾಣದಲ್ಲಿ ಇರಬೇಕಾದುದು ಮುಖ್ಯ.
ಯಕ್ಷಗಾನದ ಆಟ, ತಾಳಮದ್ದಲೆಗಳ ಮಾತುಗಾರಿಕೆ ಎಂಬುದು ಒಂದು ಅದ್ಭುತವೆನಿಸುವ ಕಲಾ - ಸಾಹಿತ್ಯಪ್ರಕಾರ. ಅದರ ಆಶುಭಾಷಣಪದ್ಧತಿ,