56/ ಕೇದಗೆ
ಗ್ರಹಿಕೆಗಳಿರುವ ಸಹ ಅರ್ಥಧಾರಿಗಳು, ಭಾಗವತರು ಇದ್ದಾರೆ. ಅವರ ಜತೆ ಹೊಂದಿಕೊಂಡು ಅವನು ನಾಟಕ ನಿರ್ಮಾಣ ಮಾಡಬೇಕು, ಇದು ಹಗ್ಗದ ಮೇಲಿನ ನಡಿಗೆಯ ಹಾಗೆ. ಈ ಮಧ್ಯೆ ಅರ್ಥಗಾರಿಕೆಯ ಮುಖ್ಯ ಅಂಗವಾಗಿ ಬೆಳೆದು ಬಂದಿರುವ ವಾದ—ಸಂವಾದಗಳಿವೆ. ಇದು ಅರ್ಥಧಾರಿಯ ಮನೋಧರ್ಮಕ್ಕೆ ಸಂಬಂಧಿಸಿದುದರಿಂದ ವಾದ—ಸಂವಾದಗಳು ಅರ್ಥಗಾರಿಕೆಯನ್ನು ಎಷ್ಟೋ ಚೆಲುವಾಗಿಸಬಹುದು, ಕೆಡಿಸಲೂಬಹುದು. ವಾದ—ಸಂವಾದಗಳು ಒಬ್ಬ ಕಲಾವಿದನ ನಿಯಂತ್ರಣದಲ್ಲಿ ಇಲ್ಲ. ಒಬ್ಬೊಬ್ಬರ ಮಾತಿನ ರೀತಿ ಕಲ್ಪನೆಗಳು ಖಂಡನ—ಮಂಡನ ವಿಧಾನಗಳು ಎತ್ತಿಕೊಳ್ಳುವ ವಿಷಯ ದೃಷ್ಟಾಂತಾದಿಗಳು ವಿಭಿನ್ನ ಸ್ವರೂಪದವುಗಳಾಗಿದ್ದು, ಅವು ಇನ್ನೊಬ್ಬರ ಜತೆಗೆ ಕೂಡಿದಾಗ ಉಂಟಾಗುವ ರಚನೆಗಳು (Patterns) ವಿವಿಧ, ವಿಭಿನ್ನ, ವಾದದಲ್ಲಿ ಸಂವಾದದಲ್ಲಿ ತೊಡಕುಗಳು ಬರುವುದೂ ಕೂಡ, ಪ್ರತಿಭೆಯ ವಿಭಿನ್ನ ಸ್ತರಗಳಿಂದ ಮಾತ್ರ ಅಲ್ಲ ವಿಧಾನದ ವ್ಯತ್ಯಾಸ, ಗ್ರಹಿಕೆಯ ಅಂತರಗಳಿಂದ ಕೂಡ.
ಪಾತ್ರಚಿತ್ರಣ, ಪಾತ್ರದ ಧೋರಣೆ, ಸನ್ನಿವೇಶ ಚಿತ್ರಣ, ಭಾವಾಭಿವ್ಯಕ್ತಿಗಳಲ್ಲಿ ಸಹಅರ್ಥಧಾರಿ, ಇತರ ಸಹಅರ್ಥಧಾರಿಗಳನ್ನು ಹೊಂದಿಕೊಂಡು ಇರುತ್ತಾನೆ, ಇರಬೇಕಾಗುತ್ತದೆ. ಒಬ್ಬನು ಕಲ್ಪಿಸಿದ ಚಿತ್ರ, ಭಾವದ ಮಟ್ಟ, ಇನ್ನೊಬ್ಬನು ತೋರುವ ಪ್ರತಿಕ್ರಿಯೆಯಿಂದ, ಅವನ ಮಾತಿನ ಸರಣಿಯಿಂದ ಶೈಲಿಯಿಂದ, ಸಂವಾದದಲ್ಲಿ ನೀಡುವ ತಿರುವುಗಳಿಂದ ಎತ್ತೆತ್ತಲೋ ಹೋಗಿ ಬೇರೆ ರೂಪ ಪಡೆಯಬಹುದು. ಎಷ್ಟೋ ಬಾರಿ ನಾವು ಕಲ್ಪಿಸಿದ ಚಿತ್ರ ನಮ್ಮ ನಿರೀಕ್ಷೆಗೆ ಮೀರಿ ಉನ್ನತವಾಗಿ ಬೆಳೆಯುವುದೂ ಇಂತಹ ತಿರುವುಗಳಿಂದಲೇ. ಇಲ್ಲೆಲ್ಲ ಅರ್ಥಧಾರಿ ತನ್ನ ಕಲ್ಪನೆಯನ್ನು ಸಹಕಲಾವಿದನ ಮನೋಧರ್ಮಕ್ಕೆ ಹೊಂದಿಸುತ್ತ ಸಾಗಬೇಕಾದ ಪ್ರಕ್ರಿಯೆಗೆ ಮನಸ್ಸನ್ನು ತೆರೆದಿಡಬೇಕು. ತಾನು ಕಲ್ಪಿಸಿಕೊಂಡಿರುವ ದಾರಿಗೆ ಇತರರು ಬರಬೇಕೆಂಬ ಜಿಗುಟಾದ ಧೋರಣೆಯನ್ನು ಅವನು ಬೇಕೆಂದೋ, ಸಹಜವಾಗಿಯೋ—ತಾಳಿದರೆ ಸಂವಾದ ಸಹಜವಾಗಿ ಅರಳುವ ನಾಟಕಕ್ರಿಯೆ ಆಗದೆ ಹೋಗುತ್ತದೆ.
ಈ ಎಲ್ಲ ವಿಚಾರಗಳಿಗೆ ಮಿಗಿಲಾಗಿ, ಅರ್ಥಧಾರಿಯ ಮಾತಿಗೆ ಆಧಾರವಾಗಿ, ಆಕರವಾಗಿರುವ 'ಪ್ರಸಂಗಸಾಹಿತ್ಯ' ಇದೆ. ಹೆಚ್ಚಿನ ಪ್ರಸಂಗಗಳು ಚಿತ್ರಿಸುವ ಮೌಲ್ಯ ಪ್ರಪಂಚ ಮುಗ್ಧವಾದದ್ದು, ಕಪ್ಪು—ಬಿಳುಪಿನ ಸರಳ ಪಾತ್ರ ಪ್ರಪಂಚ ಅಲ್ಲಿ ಇರುವಂತಹದು. ಇಂದಿನ ಮನಸ್ಸು ಒಪ್ಪಲಾರದ ಸಂಗತಿಗಳು ಅಲ್ಲಿವೆ. ಪ್ರಸಂಗಗಳು ಭಕ್ತಿಯುಗದ, ಮಧ್ಯಯುಗೀನ ಆದರ್ಶಗಳನ್ನು ಚಿತ್ರಿಸುತ್ತವೆ ಅಥವಾ ಆ ಆದರ್ಶಗಳನ್ನು ಗೃಹೀತವಾಗಿರಿಸಿ ಕತೆಯನ್ನು ಹೇಳುತ್ತವೆ. ಪ್ರಸಂಗಗಳಿಗೆ ಆಕರಗಳಾದ ಕನ್ನಡ ಕಾವ್ಯಗಳ ಆಳ ಪ್ರಸಂಗಗಳಿಗಿಲ್ಲ. ಕಾವ್ಯಗಳಿಗೆ