58/ ಕೇದಗೆ
ತರುವ ಯತ್ನಗಳಿಂದ ಬೆಳೆಯುತ್ತ ಹೋದ ಪೀಠಿಕೆ, ಹರಿಕತೆಯ ಪ್ರಭಾವದಿಂದ ಆ ಕತೆಯ ತಾತ್ವಿಕ ಧ್ವನಿಗಳನ್ನು ಒಳಗೊಳ್ಳುವ ಕಡೆಗೂ ಒಲಿಯಿತು. ಹರಿಕಥಾಸಂಪ್ರದಾಯದಲ್ಲಿ ಪೀಠಿಕೆಯೆಂಬುದು ಅಂದಿನ ಕತೆಯಲ್ಲಿ ಇರುವ (ಅಂದರೆ ಇರುವುದಾಗಿ ಹರಿಕೀರ್ತನಕಾರನು ಕಾಣುವ) ತತ್ತ್ವ, ಉಪದೇಶ, ಮೌಲ್ಯಗಳ ವಿವರಣೆ. ಈ ಪದ್ಧತಿಯ ಪ್ರಭಾವದಿಂದ ಪೀಠಿಕೆಗಳಿಗೆ ಬೇರೊಂದು ರೂಪವು ಪ್ರಾಪ್ತವಾದುದು ನಿಜ. ಪಾತ್ರದ ಮನಸ್ಸಿನ ಅಭಿವ್ಯಕ್ತಿಯ ಸಂದರ್ಭವಾಗಿ ಪೀಠಿಕೆಯನ್ನು ಬಳಸುವ ಚಿಂತನ ರೂಢಿಗೊಂಡುದೂ ಹೌದು. ಆದರೆ ಇದರಿಂದಾಗಿ ಪ್ರಸಂಗದ ಒಟ್ಟು ನಾಟಕೀಯ ಅಭಿವ್ಯಕ್ತಿಗೆ ಬಾಧಕವಾಯಿತು. ಇಂತಿಂತಹ ಕಾರಣಗಳಿಂದ ತಾತ್ವಿಕ ಹಿನ್ನೆಲೆಗಳಿಂದಾಗಿ ಒಂದು ಪಾತ್ರಕ್ಕೆ ಈ ಸ್ವರೂಪ ಬಂದಿದೆ ಎಂಬ ಒಂದು ವೈಚಾರಿಕ ಬಂಧನವು ಕೇಳುಗನಿಗೆ ಉಂಟಾಗಿ, ಸ್ವಾರಸ್ಯಕ್ಕೆ ತೊಡಕು, ಮುಂದಿನ ಪಾತ್ರಗಳ ಮತ್ತು ಕತೆಯ ಬೆಳವಣಿಗೆಗಳಿಗೂ ಪೀಠಿಕೆಗಳ ಏವರಣೆಗಳಿಗೂ ವಿಸಂಗತಿ ಉಂಟಾಯಿತು. ಈ ಹಂತದಲ್ಲಿ ಪೀಠಿಕೆಯನ್ನು ಪಾತ್ರದ ನಾಟಕೀಯ ಅಭಿವ್ಯಕ್ತಿಯ ಅಂಗವಾಗಿ ಪುನಃಸ್ಥಾಪಿಸುವ ಅವಶ್ಯಕತೆ ಉಂಟಾಗಿ ಅಂತಹ ಪ್ರಯತ್ನ ನಡೆಯಿತು. ಪಾತ್ರದ ಮೊದಲ ಪದ್ಯದ ವಿಸ್ತರಣವಾಗಿಯೇ ಪೀಠಿಕೆಯನ್ನು ಹೇಳುವ ಪದ್ದತಿ ಬಂದಿತು. ಯಾವದೇ ವಿವರಣೆ, ಶಾಸ್ತ್ರೀಯ ಅಂಶ, ಕತೆಯ ಹಿಂದಣ ಘಟನೆಗಳ ಬಗೆಗಿನ ಚಿಂತನವನ್ನು ಆ ಪದ್ಯದ ಅರ್ಥ ವಿವರಣೆಯ ಅಂಗವಾಗಿ ಪೋಣಿಸಿ ಹೇಳುವ ಈ ಪದ್ದತಿ ಸೃಷ್ಟಿಶೀಲ ಅರ್ಥಗಾರಿಕೆಯ ಬೆಳವಣಿಗೆಯಲ್ಲಿ ಒಂದು ದೊಡ್ಡ ಮಜಲು. ಪ್ರಸಂಗದ ಅಡಿಪಾಯವನ್ನು ಉನ್ನಯನಗೊಳಿಸುವ ಆ ಕ್ರಿಯೆಗೆ ಪೀಠಿಕೆ ಹೇಳುವಲ್ಲಿ ಪಾತ್ರಕ್ಕಿರುವ ಹೆಚ್ಚಿನ ಸ್ವಾತಂತ್ರ ಸಹಕಾರಿಯಾಯಿತು.
ಸಂಭಾಷಣೆಗಳ ಮಧ್ಯೆ ಪಾತ್ರಧಾರಿಗಳು ಸ್ವಗತವಾಗಿ (aside) ಒಂದು ವಿಷಯವನ್ನು ಹೇಳಿ, ಸಂಭಾಷಣೆಯನ್ನು ಮುಂದುವರಿಸುವ ಕ್ರಮ ಯಕ್ಷಗಾನ ಸಂಪ್ರದಾಯಕ್ಕೆ ಬಂದುದ್ದು. "ಓಹೋ, ಇವನು ಹೀಗೆ ಹೇಳುತ್ತಿದ್ದಾನೆ, ಒಂದು ಉಪಾಯ ಮಾಡುತ್ತೇನೆ" ಇತ್ಯಾದಿ ಸಂದರ್ಭಗಳು. ಇದನ್ನು ಬೆಳೆಸಿ ಪಾತ್ರಗಳಿಗೆ ಸಮರ್ಥನೆ, ಸ್ವಭಾವಚಿತ್ರಣ, ನಾಟಕೀಯ ಪ್ರಯೋಜನವನ್ನು ಒದಗಿಸುವ ಪ್ರಯೋಗಗಳಾಗಿವೆ. ಇಂತಹ ಸ್ವಗತಗಳು ಚುಟುಕಾಗಿ ಇರಬೇಕು ಮತ್ತು ಪ್ರಸಂಗದಲ್ಲಿ ಅದಕ್ಕೆ ಅವಕಾಶ ಔಚಿತ್ಯ ಇದ್ದರೆ ಇದು ಸರಿ ಹೊಂದುತ್ತದೆ. ಇದು ದೀರ್ಘವಾದರೆ, ಹೊಂದಿಕೆಯಾಗದಿದ್ದರೆ ಸಹಪಾತ್ರಗಳಿಗೆ ಮುಜುಗರ ತರುತ್ತದೆ.
ಅನ್ಯಪಾತ್ರಗಳ ದೃಷ್ಟಿನಿಲುಮೆಗಳನ್ನು ವಿವೇಚಿಸುವ, ಖಂಡಿಸುವ ಒಂದು ಪದ್ಧತಿ ಬಳಕೆಯಲ್ಲಿದೆ. ಈ ಪದ್ಧತಿಯಲ್ಲಿ ಒಂದು ವಿಶಿಷ್ಟ ಸ್ವಾರಸ್ಯವಿದೆ.