ಈ ಪುಟವನ್ನು ಪ್ರಕಟಿಸಲಾಗಿದೆ
ಅರ್ಥಗಾರಿಕೆ : ಸೃಜನಶೀಲದೃಷ್ಟಿ /63

ಏಕತಾನತೆ ಬರದ ಹಾಗೆ ಎಚ್ಚರವೂ ಬೇಕು. ಸ್ವರದ ಬಳಕೆಯ ತಂತ್ರ ಕಲಾವಿದನಿಗೆ ಪ್ರಯೋಗಕ್ಕೆ ವಿಪುಲ ಅವಕಾಶ ನೀಡುತ್ತದೆ.


ಯಕ್ಷಗಾನದ ಮಾತುಗಾರಿಕೆ ಆಶುಭಾಷಣವಾದುದರಿಂದ ಅದು ಸಂವಾದರಂಗವೂ, ವಾದರಂಗವೂ ಆಗಿ ಪಡೆಯುವ ಸಾಫಲ್ಯ ಅನನ್ಯವಾದುದು. ಅರ್ಥಧಾರಿಗಳೊಳಗೆ ನಡೆಯುವ ವಾದದ ಸ್ವಾರಸ್ಯ ಪ್ರೋತೃವನ್ನು ಕಥಾ ಪ್ರವಾಹದೊಳಕ್ಕೆ ಸೆಳೆದು ತೊಡಗಿಸುತ್ತದೆ. ಒಂದು ಚಿಕ್ಕ ಘಟನೆಯನ್ನು, ಒಂದು ವಿಷಯವನ್ನು ಎಷ್ಟೊಂದು ಮುಖಗಳಿಂದ ಪರಿಶೀಲಿಸಬಹುದೆಂಬುದಕ್ಕೆ ಅರ್ಥಗಾರಿಕೆಯ ವಾದ ಸಂವಾದಗಳು ಸಾಕ್ಷಿ. ಸೃಷ್ಟಿಶೀಲನಿಗೆ ಇಲ್ಲಿ ತರ್ಕ, ಭಾವ ಎರಡರಲ್ಲೂ ವಿಶಾಲಕ್ಷೇತ್ರ ತೆರೆದಿದೆ. ವಾದ ಸಂವಾದಗಳಲ್ಲಿ ಸಿಡಿದು ಬರುವ ವಿಷಯಗಳು, ಉದಾಹರಣೆ, ವಿನೋದ, ಅಲಂಕಾರಗಳ ತಾಕಲಾಟ, ಟೆನಿಸಿನ ಕಟ್, ಸ್ಪಿನ್, ಪೋಲಿಗಳ ಹಾಗೆ ಭವ್ಯ ಅನುಭವ ನೀಡುತ್ತದೆ. ವಾದ ಸಂವಾದಗಳು ಪ್ರತ್ಯುತ್ಪನ್ನಮತಿತ್ವಕ್ಕೆ ಮುಕ್ತಕ್ಷೇತ್ರ. ಗಾದೆಗಳ, ಉಪಕತೆಗಳ ಬಳಕೆಗೆ, ವಿಸ್ತ್ರತ ಲೋಕಾನುಭವದ ಅಭಿವ್ಯಕ್ತಿಗೆ ಇಲ್ಲಿ ಅವಕಾಶ. ಪಟ್ಟು ಬಿಡದ ಮಾತು, ವಿತಂಡ, ದುರ್ವಾದಗಳು ಕೂಡ, ಪಾತ್ರದ ಸ್ವಭಾವಾನುಸಾರ, ಕಲಾತ್ಮಕವಾಗಿ ಬಳಕೆಗೊಂಡಾಗ ಒಳ್ಳೆಯ ಅನುಭವ ನೀಡುತ್ತವೆ.


ತಾಳಮದ್ದಳೆಯ ಅರ್ಥಧಾರಿಗಿರುವ ಸ್ವಾತಂತ್ರ್ಯ ಆಟದ ವೇಷಧಾರಿಗಿಲ್ಲ. ಅವೆರಡರ ಅರ್ಥಗಾರಿಕೆಯಲ್ಲಿ ಇರುವ ಭಿನ್ನತೆ ಗಾತ್ರಕ್ಕೆ ಮಾತ್ರ ಸಂಬಂಧಿಸಿದುದಲ್ಲ, ಮಾಧ್ಯಮಗಳ - ವ್ಯತ್ಯಾಸವೂ ಮುಖ್ಯವಾದುದು. ಆಟದ ರಂಗ, ಹಿಮ್ಮೇಳ, ವೇಷ, ನೃತ್ಯಗಳ ಆವರಣದ ಮೂಲಕ ಅರ್ಥಗಾರಿಕೆಗೆ ಹಾಕುವ ಚೌಕಟ್ಟು ಬೇರೆ ತೆರನಾದುದು. ಆದರೆ ತಾಳಮದ್ದಳೆಗಿಂತ ಆಟದಲ್ಲಿ ಕಥೆ ಹೆಚ್ಚು ವಿವರವಾಗಿ, ಸಾಂದ್ರವಾಗಿ ಸಾಗುತ್ತದೆ. ಗಯಗಂಧರ್ವ, ರುಕ್ಕ, ಚಂದಗೋಪ, ಕೌಂಡ್ಳೀಕ, ಬಕಾಸುರ - ಇಂತಹ ಪಾತ್ರಗಳ ಅರ್ಥಗಾರಿಕೆ ಸಫಲವಾಗುವುದು ಕೂಡ ಆಟದ ರಂಗಸ್ಥಳದಲ್ಲಿ. ವೈವಿಧ್ಯಪೂರ್ಣವಾಗಿ ಸೃಷ್ಟಿ ಆಗುತ್ತಿರುವ ಪ್ರಸಂಗಸಾಹಿತ್ಯ ರಂಗಸ್ಥಳದ ಮಾತುಗಾರಿಕೆಗೆ ಹೊಸ ಹೊಸ ಸವಾಲುಗಳನ್ನು ನೀಡಿದೆ.

ತುಳು ಆಟಗಳ ಅರ್ಥಗಾರಿಕೆ ಸೃಜನಶೀಲತೆಯಲ್ಲಿ ಇನ್ನೊಂದು ಬಗೆಯ ಪ್ರಯೋಗಕ್ಷೇತ್ರ. (ತುಳು ಆಟಗಳು ಮತ್ತು ಯಕ್ಷಗಾನರಂಗದ ಸ್ವರೂಪ, ಅವುಗಳ ಸಾಧುತ್ವದ ಪ್ರಶ್ನೆಗಳು ಇಲ್ಲಿ ಪ್ರಸಕ್ತವಲ್ಲ.) ಬದುಕಿನ ಭಾಷೆ ಮಾತ್ರವೇ ಆಗಿರುವ ಸಾಹಿತ್ಯಕವಾದ ಪ್ರತ್ಯೇಕ ಶೈಲಿಯನ್ನು ಕನ್ನಡದಂತೆ ರೂಪಿಸಿಕೊಳ್ಳದ