ಈ ಪುಟವನ್ನು ಪ್ರಕಟಿಸಲಾಗಿದೆ
ಅರ್ಥಗಾರಿಕೆ : ಸೃಜನಶೀಲದೃಷ್ಟಿ /65

ಅಂದರೆ ಸಡಿಲವಾಗಿರುತ್ತದೆ. ಮಾತುಗಾರಿಕೆಯಲ್ಲಿ ಪ್ರೌಢತೆಯ ಬಂಧನವಿಲ್ಲ. ಜನಮನಕ್ಕೆ ನೇರವಾಗಿ ಸ್ಪಂದಿಸುವ ಸಾಧ್ಯತೆ ಇದೆ. ಇದೀಗ ಕೆಲವು ಪ್ರಸಂಗಗಳಲ್ಲಿ ಹಾಸ್ಯಗಾರನು ವಹಿಸುವ ಪಾತ್ರಗಳು ಕತೆಯಲ್ಲಿ ಪ್ರಧಾನ ಪಾತ್ರಗಳೂ ಆಗಿರುವುದರಿಂದ (ವೀರಚಂದ್ರ ವಿಜಯ, ಸೊರ್ಕುದ ಸಿರಿಗಿಂಡೆ ಈ ಪ್ರಸಂಗಗಳು) ಹಾಸ್ಯಗಾರರಿಗೆ ಅಥವಾ ಆ ಪಾತ್ರಗಳನ್ನು ವಹಿಸುವ ಮುಖ್ಯ ವೇಷಧಾರಿಗಳಿಗೆ ಅಸಾಧಾರಣವಾದೊಂದು ಸಂದರ್ಭ ಒದಗಿ ಬಂದಿದೆ. ನಮ್ಮ ಹಿರಿಯ ಹಾಸ್ಯಗಾರರೂ, ಹಾಸ್ಯಗಾರರಲ್ಲದ ಮುಖ್ಯ ಕಲಾವಿದರೂ, ಹಾಸ್ಯ ಪಾತ್ರಗಳ ಮೂಲಕ ಮಾತುಗಾರಿಕೆ ಅರಳುವ ಮಟ್ಟಗಳ ಔನ್ನತ್ಯವನ್ನು ಅಳತೆಮಾಡುವಲ್ಲಿ ಯಶಸ್ವಿಗಳಾಗಿದ್ದಾರೆ.

ಅರ್ಥಗಾರಿಕೆ ವರ್ತಮಾನಕ್ಕೆ ಸಂಗತವಾಗಿ ನಿತ್ಯನವೀನವಾಗಬೇಕಾದರೆ, ಅರ್ಥಧಾರಿಗೆ ಸಾರ್ವಕಾಲಿಕವಾಗಿಯೂ ಸಮಕಾಲೀನವಾಗಬಲ್ಲ ಸಾಂಪ್ರದಾಯಿಕ (Classical) ಮಾರ್ಗದಲ್ಲಿ ಆಧುನಿಕವಾಗಬಲ್ಲ ಜೀವನದ ನೋಟವೂ, ಅಷ್ಟೆ ಪ್ರಖರವಾದ ಅಭಿವ್ಯಕ್ತಿ ಕ್ರಮವೂ ಸಿದ್ಧಿಸಬೇಕು. ಕಾಲವ್ಯತಿರೇಕವನ್ನು ಮೀರಿ ನಿಲ್ಲಬಲ್ಲ ಪ್ರಖರತೆ ಬೇಕು. ಅಧ್ಯಯನ, ಪ್ರತಿಭೆ, ಕಲೆಗಾರಿಕೆಗಳ ತ್ರಿಪುಟಿ ಅದ್ವೈತವಾಗಬೇಕು.








ಪದವೀಧರ ಯಕ್ಷಗಾನ ಸಮಿತಿ, ಮುಂಬಯಿ ಇವರು ಏರ್ಪಡಿಸಿದ ಯಕ್ಷಗಾನ ಸಾಹಿತ್ಯ ಸಮ್ಮೇಲನದಲ್ಲಿ 22-10-83 ರಂದು ಮಂಡಿಸಿದ ಪ್ರಬಂಧ (ಪ್ರಕಟನೆ ಯಕ್ಷಕರ್ದಮ,1984) ದ ಪರಿಷ್ಕೃತ ರೂಪ.