ಈ ಪುಟವನ್ನು ಪ್ರಕಟಿಸಲಾಗಿದೆ
ಯಕ್ಷಗಾನಪರಂಪರೆ ಮತ್ತು ತುಳು/16

ಮೂಡಿದಂತಹದು. ಬೆರಗುಗೊಳಿಸುವ ವೈವಿಧ್ಯ, ಸಮೃದ್ಧಿ, ಶ್ರೀಮಂತಿಕೆಯುಳ್ಳ ಈ ಕಲೆಯ 'ಮಾರ್ಗ' ವನ್ನು ಅಥವಾ ಚೌಕಟ್ಟನ್ನು ಲಕ್ಷಿಸದೆ ಮಾಡುವ ಯಾವುದೇ ಪರಿವರ್ತನೆಯು ಈ ಕಲೆಗೆ ದೊಡ್ಡ ಸಮಸ್ಯೆಗಳನ್ನು ತಂದೊಡ್ಡುವುದು ನಿಶ್ಚಿತ. ತುಳು ಪ್ರಯೋಗಗಳಲ್ಲಿ ಆಗಿರುವುದೂ ಇದೆ. ಯಕ್ಷಗಾನವು ಯಕ್ಷಗಾನವಾಗಿರುವುದು ಅದರ ಸ್ವರೂಪ (Form) ದಿಂದ. ಈ ಅರ್ಥದಲ್ಲಿ ಅದು ರೂಪ ಪ್ರಧಾನವಾದ ಕಲೆ. ಅಂತಹ ರೂಪದ ರಕ್ಷಣೆಗೆ ಒತ್ತು ಕೊಡಬೇಕಾಗಿರುವುದು ಅತ್ಯಾವಶ್ಯಕ. ಬದಲಾವಣೆಯ ಹೆಸರಿನಲ್ಲಿ ಕಲೆಯ ಸ್ಕೂಲವಾದ ಚೌಕಟ್ಟನ್ನು ಬಲಿಕೊಡುವುದು ಸಾಂಸ್ಕೃತಿಕ ಅಪವಾದವಾಗುತ್ತದೆ. ಯಕ್ಷಗಾನದ ರೂಪದಲ್ಲಾಗಲಿ, ವಸ್ತು ಆಶಯಗಳಲ್ಲಾಗಲಿ ಯಾವುದೇ ಬದಲಾವಣೆ ಕೂಡದು ಎಂದು ಪ್ರಜ್ಞಾವಂತರಾರೂ ಹೇಳಲಾರರು. ಆದರೆ ಬದಲಾವಣೆಯೆಂಬುದು ಆ ಕಲೆಯ ಇತಿಹಾಸದ ಮುಂದುವರಿಕೆಯಾಗಬೇಕೇ ಹೊರತು ವಿಕೃತ ಸ್ಥಿತಿಯಾಗಬಾರದು.

ಕಲೆಯನ್ನು ವರ್ತಮಾನಕಾಲಕ್ಕೆ ಪ್ರಸ್ತುತವೆನಿಸುವ ಹಾಗೆ ಮಾಡುವ ದೃಷ್ಟಿ, ಕಲೆ ಹೆಚ್ಚು ಹೆಚ್ಚು ಸಂಗತವಾಗಲು ಮುಖ್ಯವೇ ಹೌದು. ಬದಲಾವಣೆಯ ಚಡಪಡಿಕೆ. ಹೊಸ ಹುಟ್ಟಿಗಾಗಿ ನಡೆಯುವ ಪ್ರಸವವೇದನೆ, ಶುಭಲಕ್ಷಣ, ಆದರೆ ಹೊಸ ಹುಟ್ಟು ಹೇಗಿರಬೇಕು ಎಂಬುದೇ ಮುಖ್ಯವಾದ ಪ್ರಶ್ನೆ.

ಯಕ್ಷಗಾನದಲ್ಲಿ ತುಳು ಭಾಷೆ ಬಳಕೆಗೆ ಬಂದು ಮೂರು ದಶಕಗಳು ಸಂದಿವೆ. ಇಂದು ತೆಂಕುತಿಟ್ಟಿನಲ್ಲಿರುವ ಹದಿನಾಲ್ಕು ಮೇಳಗಳ ಪೈಕಿ ಅರ್ಧಕ್ಕೂ ಹೆಚ್ಚಿನವು ಪ್ರಧಾನವಾಗಿ ತುಳು ಪ್ರದರ್ಶನಗಳನ್ನೇ ನೀಡುತ್ತಿವೆ. ಯಕ್ಷಗಾನ ಪ್ರದರ್ಶನದ ಸರ್ವಾಂಗಸೌಂದರ್ಯದ ಬುಡವೇ ಅಪಾಯದಲ್ಲಿದೆ. ಇದು ಶೈಲಿಗೆ ಸಂಬಂಧಿಸಿದ ಪ್ರಶ್ನೆ. ಯಕ್ಷಗಾನದ ವೇಷವಾಗಲಿ, ಅಭಿವ್ಯಕ್ತಿ ವಿಧಾನವಾಗಲಿ ವಾಸ್ತವಸ್ವರೂಪದವುಗಳಲ್ಲ. ಅವು ಸಾಂಕೇತಿಕ ಮತ್ತು ಕಾಲ್ಪನಿಕ ದೃಷ್ಟಿಯ ಸೃಷ್ಟಿಗಳು. ಇದು ಯಕ್ಷಗಾನದ ಮೂಲ ಚೌಕಟ್ಟಿನ ಅಡಿಪಾಯ. ಇದನ್ನು ಅವಗಣಿಸುವ ಯಾವುದೇ ವಿವೇಚನೆ, ಮೊದಲ ಹಂತದಲ್ಲಿ ಎಡವಿ ಬೀಳುತ್ತದೆ. ಯಕ್ಷಗಾನದಂತಹ ಕಲೆಗೆ, ಅದರ ಎಲ್ಲ ಅಂಗಗಳಲ್ಲೂ, ಪ್ರಬುದ್ಧವಾಗಿ ಬೆಳೆದ ತನ್ನದಾದ ಒಂದು 'ಭಾಷೆ' ಎಂಬುದಿದೆ. ಭಾಷೆಗೆ ವ್ಯಾಕರಣವಿದ್ದ ಹಾಗೆ, ಕಲೆಗೂ ತನ್ನದಾದ 'ವ್ಯಾಕರಣ'ವಿದೆ. ಇದು ಪರಂಪರೆಯಿಂದ ಬಂದದ್ದು. ಅದನ್ನು ಉಳಿಸಿಕೊಂಡು, ಮುನ್ನಡೆ ಆಗಬೇಕು ಹೊರತು ಅದನ್ನು ಅಸ್ತವ್ಯಸ್ತಗೊಳಿಸಿ ಅಲ್ಲ. ಯಕ್ಷಗಾನದ ಕಲಾವ್ಯಾಕರಣದಲ್ಲಿ ಸಮಸ್ಯೆಗಳಿರಬಹುದು, ತೊಡಕುಗಳೂ ಇರಬಹುದು. ಇದು ಆಂತರಿಕ ಸಮಸ್ಯೆ, ಅದರ ಪರಿಹಾರ ಶೈಲಿಯನ್ನು ತಿಳಿದ, ಕಲೆಯ ಸ್ವರೂಪಜ್ಞಾನವುಳ್ಳ ತಜ್ಞರಿಂದ ಆಗಬೇಕಾಗಿದೆ.