ಈ ಪುಟವನ್ನು ಪ್ರಕಟಿಸಲಾಗಿದೆ
ಯಕ್ಷಗಾನಪರಂಪರೆ ಮತ್ತು ತುಳು /71

ಆಕ್ಷೇಪಿಸುವವನು ಸಾರ್ವತ್ರಿಕವಾಗಿ ಪ್ರಗತಿವಿರೋಧಿ ಎಂದಾಗಲಿ, ಸಾಂಸ್ಕೃತಿಕ ಪಕ್ಷಪಾತಿ ಎಂದಾಗಲಿ ತೀರ್ಮಾನಿಸುವುದರಲ್ಲಿ ನ್ಯಾಯವಿಲ್ಲ.

ಯಾವುದೇ ಕಲೆಯಲ್ಲಿ, ಅದರಲ್ಲೂ ವಿಶಿಷ್ಟ ಸ್ವರೂಪವನ್ನು ತಳೆದಿರುವ ಶಾಸ್ತ್ರೀಯ ಲಕ್ಷಣಗಳುಳ್ಳ ಕಲೆಗಳಲ್ಲಿ ಕಾಣಿಸಿಕೊಳ್ಳುವ ಪರಿವರ್ತನೆಯು ಕಲಾ ದೃಷ್ಟಿಯಿಂದ ಸೂಕ್ತವೆನಿಸಬೇಕಾದರೆ ಅದು ಈ ಕೆಲವು ಮಾನದಂಡಗಳಿಗೆ ಒಳಗಾಗ ಬೇಕಾಗುತ್ತದೆ:

  1. . ಪರಿವರ್ತನೆಯು ಆ ಆ ಕಲೆಯ 'ಒಳಗಿನ ಒತ್ತಡ'ಗಳಿಂದ ಮೂಡಿರಬೇಕು.
  2. . ಪರಿವರ್ತನೆಯನ್ನು ತರುವವನಿಗೆ ತನ್ನ ಕ್ಷೇತ್ರದ ಶೈಲಿಯ ಬಗೆಗೆ ಪ್ರೀತಿಯೂ, ಪರಿಜ್ಞಾನವೂ ಇರಬೇಕಾಗುತ್ತದೆ.
  3. . ಪರಿವರ್ತನೆಯ ಹಿಂದೆ ಸಶಕ್ತವಾದ ಪ್ರತಿಭೆಯೂ, ಪರಿಶ್ರಮವೂ, ಪೂರ್ವ ಸಿದ್ಧತೆಯೂ ಇರಬೇಕಾಗುತ್ತದೆ. ಈ ಎಲ್ಲ ನಿಕಷಗಳಲ್ಲಿ ಒರೆದಾಗ ತುಳು ಯಕ್ಷಗಾನ ಪ್ರಯೋಗಗಳು ತೀರ ನಿರಾಶಾಜನಕವಾಗಿವೆ ಎನ್ನದೆ ವಿಧಿಯಿಲ್ಲ.

ನಿಜವಾದ ಸೃಜನಶೀಲನಿಗೆ, ಹೊಸತನದ ಒತ್ತಡ ಬರುವುದು 'ಒಳಗಿನಿಂದ' ಎಂದರೆ ತನ್ನ ಮಾಧ್ಯಮದ ಶಕ್ತಿ, ಅದರ ಜತೆಗೆ ಈಗ ಅದಕ್ಕಿರುವ ಮಿತಿ, ಇವುಗಳಿಂದ ತಾನು ಸಂಪೂರ್ಣವಾಗಿ ಇದನ್ನು ಬಳಸಿಕೊಂಡಿಲ್ಲ. ಇದರ ಅಭಿವ್ಯಕ್ತಿ ಸಾಧ್ಯತೆಯನ್ನು ಇನ್ನಷ್ಟು ವಿಸ್ತರಿಸಬೇಕು ಎಂಬ ಆಕಾಂಕ್ಷೆಯಿಂದ; ಹಾಗೆಯೇ, ಪ್ರಸಕ್ತ ಸ್ಥಿತಿಯ ಬಗೆಗಿನ ಕಲಾದೃಷ್ಟಿಯ ಅತೃಪ್ತಿಯಿಂದ, ಹೊಸ ಪ್ರಯೋಗ ಮೂಡಿ ಬರುತ್ತದೆ. ತುಳು ಯಕ್ಷಗಾನಗಳು ಇಂತಹ ಒಳ ಒತ್ತಡಗಳಿಂದ ಬಂದವುಗಳಾಗಿದ್ದರೆ ಅವುಗಳು ಈ ಸ್ಥಿತಿಯಲ್ಲಿ ಇರುತ್ತಿರಲಿಲ್ಲ. ಪರಿಷ್ಕರಣ ಅಥವಾ ಉತ್ತಮಿಕೆಯ ಕ್ರಾಂತಿ ಇಲ್ಲಿ ಇರಲಿಲ್ಲ.

ತುಳು ಯಕ್ಷಗಾನಗಳನ್ನು ಪ್ರಯೋಗಿಸುವ ಭರದಲ್ಲಿ ಯಕ್ಷಗಾನದ ಸರ್ವಾಂಗಶೈಲಿಯ ಬಗೆಗೆ ಯಾವುದೇ ಗಮನ ಇರಲಿಲ್ಲ ಎಂದು ಸ್ಪಷ್ಟವಾಗುತ್ತಿದೆ. ವೇಷಭೂಷಣಗಳು ದಿವ್ಯ ಅಲಕ್ಷ್ಯಕ್ಕೆ ತುತ್ತಾಗಿವೆ. ಈ ಬಗ್ಗೆ ಕಲಾವಿದರಿಗಾಗಲಿ, ಕಲಾಮೇಳಗಳ ಮಾಲೀಕರಿಗಾಗಲಿ, ಯಾವುದೇ ಬೇಸರ ಇಲ್ಲದಿರುವುದನ್ನು ಕಂಡರೆ ತುಂಬ ವ್ಯಥೆಯಾಗುತ್ತದೆ. ಇಷ್ಟ ಬಂದ ರೀತಿಯ ವೇಷರಚನೆ, ಯಾವುದೇ ವರ್ಣನಿಯಮಗಳಿಲ್ಲದ ಬಟ್ಟೆಗಳು - ಒಂದು ಉಡುವ ಬಟ್ಟೆ, ಒಂದು ಅಂಗಿ, ಮುಂಡಾಸು, ಯಾವುದೇ ಆಕಾರದ ಒಂದೆರಡು ಆಭರಣ, ಇಷ್ಟಿದ್ದರೆ ಯಾವ ವೇಷವೂ ಆಗುತ್ತದೆ. ವಾಸ್ತವತೆಯ ದೃಷ್ಟಿಯಿಂದ ಕಾಲ್ಪನಿಕ ಸೃಷ್ಟಿ ಪೂರ್ಣವಾಗಿ ಅಲಕ್ಷಿಸಲ್ಪಟ್ಟಿದೆ. ಇದಕ್ಕೆ ತುಳು ಪ್ರಯೋಗಗಳನ್ನು ತರುವಾಗ ಯಕ್ಷಗಾನದ ಬಗೆಗಿನ ಕಾಳಜಿಯಾಗಲಿ, ಪರಿಜ್ಞಾನವಾಗಲಿ ಇಲ್ಲದೆ ಬಂದು ವ್ಯವಹರಿಸುವುದೇ ಕಾರಣ. ಪರಿವರ್ತನೀಯ ಯಾವುದು, ಅಪರಿವರ್ತನೀಯ ಯಾವುದು ಎಂಬ ವಿವೇಕಕ್ಕೆ ಅವಕಾಶ ಇಲ್ಲದೆ ಹೋಯಿತು.