ಗದ್ದೆ, ತೋಟ, ಬೀದಿಗಳನ್ನು ಬಿಂಬಿಸುವಂತೆಯೇ ಕಾಣುವುದೇಕೆ? ಕಾರಣ, ಕನ್ನಡಕ್ಕಿರುವ ಗ್ರಾಂಥಿಕ ಭಾಷೆಯ ಹಿನ್ನೆಲೆಯಾಗಲಿ, ಪೌರಾಣಿಕ ಸಾಹಿತ್ಯದ ಅನುಕೂಲವಾಗಲಿ ತುಳುವಿಗೆ ಇಲ್ಲ. ಹಾಗೆಂದು ತುಳುವನ್ನು ಪರಿಷ್ಕೃತವಾಗಿಸಿ ಆಡಿದರೆ, ತುಳು ಯಕ್ಷಗಾನದ ಮೂಲ ಉದ್ದೇಶ - ಜನರಿಗೆ ತಲುಪುವಂತಹ ಹದ್ದು - ವಿಫಲವಾಗುತ್ತದೆ" ಎನ್ನುತ್ತಾರೆ ಹಿರಿಯ ಕಲಾವಿದ ಶೇಣಿ ಗೋಪಾಲಕೃಷ್ಣ ಭಟ್ಟರು. ಆದುದರಿಂದ ಇಲ್ಲಿ ಎರಡೂ ಆಗಲಿ ಎಂಬ ತೇಪೆ ನ್ಯಾಯ ಅಸಾಧ್ಯವೆಂದು ಅವರ ಅನಿಸಿಕೆ. ಇರಲಿ. ಆದರೆ ಸಮಗ್ರ ಕಲಾಸೃಷ್ಟಿ ಆಗುವುದಾದರೆ ಆಕ್ಷೇಪ ಇರಲಾರದು.
ಕನ್ನಡದ ಯಕ್ಷಗಾನವೆಂಬುದು, ಕನ್ನಡಭಾಷೆಯು ಸಾಕಷ್ಟು ಬೆಳೆದ ಹಂತದಲ್ಲಿ ಸಾಕಷ್ಟು ಪೋಷಕ ಪೂರಕ ಸಾಮಗ್ರಿಯೊಂದಿಗೆ ಕಾಣಿಸಿಕೊಂಡು ಬೆಳೆದ ಕಲೆ, ತುಳು ಸಾಹಿತ್ಯವಾಗಿ ಯಕ್ಷಗಾನರಂಗದ ಆವಶ್ಯಕತೆಗಳನ್ನು ಪೂರೈಸುವಲ್ಲಿ ಕೆಲವು ತೊಡಕುಗಳನ್ನು ಹೊಂದಿದೆ ಎಂಬುದು ಸುಲಭವಾಗಿ ಅಲ್ಲಗಳೆಯ ಬಹುದಾದ ವಿಷಯವಲ್ಲ. ಕನ್ನಡದಲ್ಲಿ ಇರುವ ಒಂದು 'ಮಾರ್ಗ'ವನ್ನು ಬಳಸಿ ನಡೆಯುವ ಕೆಲಸ ಮಾತ್ರ ಇದೆ. ತುಳು ಯಕ್ಷಗಾನವೆಂದರೆ ಅದರಲ್ಲಿ ಮಾರ್ಗ ವನ್ನು ನಿರ್ಮಿಸುವ ಮತ್ತು ಅದರಲ್ಲಿ ಸರಿಯಾಗಿ ಮುನ್ನಡೆಯುವ ಎರಡು ಕೆಲಸಗಳ ಹೊಣೆಯಿದೆ. ವ್ಯಾಪಕವಾಗಿ ಬೆಳೆದ ತುಳು ಯಕ್ಷಗಾನ ರಂಗಭೂಮಿ, ಈ ಆವಶ್ಯಕತೆಯನ್ನು ಗಮನಿಸಿ ರೂಪುಗೊಂಡಿಲ್ಲ. ಹೀಗೆ ಒಮ್ಮೆ ಅದು ಹುಟ್ಟಿ ಬಂದು, ಜನರ ಮುನ್ನಣೆ ಗಳಿಸತೊಡಗಿದುದರಿಂದ ಹಿಂತಿರುಗಿ ನೋಡಲು ಸಮಯವಾಗಲಿ, ವ್ಯವಧಾನವಾಗಲಿ ಉಳಿಯಲಿಲ್ಲ. ಅದೇ ಅಪಕ್ವ ಸ್ಥಿತಿ ಮುಂದುವರೆದು ಮತ್ತಷ್ಟು ಅದು ವಿರೂಪಗೊಂಡು ಪ್ರಕಟವಾಯಿತು.
ಈ ಸ್ಥಿತಿ ಸ್ವಾಭಾವಿಕವೇ ಆಗಿತ್ತು. ಏಕೆಂದರೆ, ಯಕ್ಷಗಾನವನ್ನು ತುಳುವಿಗೆ ತಂದಾಗ, ಯಕ್ಷಗಾನದ ಹಂದರಕ್ಕೆ ತುಳುವನ್ನು ತುಂಬಿಸಿದುದಾಗಿರಲಿಲ್ಲ. ಅಂದರೆ ಯಕ್ಷಗಾನದ ಶರೀರಕ್ಕೆ ತುಳುವನ್ನು ಸಮನ್ವಯಗೊಳಿಸಲಿಲ್ಲ. ಬದಲಾಗಿ ಅದು ಸಮಕಾಲೀನ ತುಳು ಬದುಕಿನ ಕಲ್ಪನೆಗೆ ಯಕ್ಷಗಾನವನ್ನು ತುರುಕಿದ ಒಂದು ಅವ್ಯವಸ್ಥಿತ ಮಿಶ್ರಣವಾಯಿತು. ಇಂತಹ ಉತ್ಸಾಹದ, ಆದರೆ ಕಲಾತ್ಮಕ ವ್ಯವಸ್ಥೆಯಿಲ್ಲದ ಒಂದು ಪ್ರಯೋಗ, ಯಕ್ಷಗಾನದ ಪರಂಪರೆಯನ್ನು ಅಲ್ಲಾಡಿಸಿದ್ದು ಆಶ್ಚರ್ಯವಲ್ಲ. ಏಕೆಂದರೆ ಅದು ಸಹಜವಾದ ಬೆಳವಣಿಗೆಯ ಭಾಗವಾಗಿರಲಿಲ್ಲ.
ಒಂದಿಷ್ಟು ಕಾಲವಾದರೂ, ತುಳು ಯಕ್ಷಗಾನವು ಕನ್ನಡ ಯಕ್ಷಗಾನ ಪರಂಪರೆಯ ರೂಪವನ್ನೇ ಬಳಸಿ, ಪ್ರಯುಕ್ತವಾಗುತ್ತಿದ್ದರೆ ಈ ಸಮಸ್ಯೆ ಬರುತ್ತಿರಲಿಲ್ಲ ಎನ್ನುತ್ತಾರೆ ಹಿರಿಯ ಭಾಷಾತಜ್ಞ ಡಾ| ಯು. ಪಿ. ಉಪಾಧ್ಯಾಯ. "ಯಕ್ಷಗಾನದ ಕ್ಲಾಸಿಕಲ್ ಸಂಪ್ರದಾಯವನ್ನೇ ಬಳಸಿ, ಪೌರಾಣಿಕ ಕತೆಗಳನ್ನು