ಈ ಪುಟವನ್ನು ಪ್ರಕಟಿಸಲಾಗಿದೆ
ಯಕ್ಷಗಾನಪರಂಪರೆ ಮತ್ತು ತುಳು /75


ಜನಾಂಗೀಯ ಪ್ರತಿಮೆ, ಪ್ರತೀಕ, ಅಭಿವ್ಯಕ್ತಿ, ವೈಶಿಷ್ಟ್ಯಗಳಿಂದ ಕೂಡಿರುತ್ತದೆ ಎಂಬುದು ಇನ್ನೊಂದು ಮುಖ. ಕಲೆಯಲ್ಲಿ ತಿಟ್ಟುಗಳು ಬೆಳೆಯುವುದು ಸ್ವಾಗತಾರ್ಹ.

ಸತತವಾದ ಶೋಧನೆಯು ಕಲಾವಿದನ ಕರ್ತವ್ಯ. ದಾರಿಬಿಡದೆ, ಪರಂಪರಾ ಬದ್ಧ ಕಲೆಯ ಶಿಸ್ತನ್ನುಳಿಸಿ, ಹೊಸ ಸೃಷ್ಟಿ ಸಾಧ್ಯ ಎಂಬುದನ್ನು ಹಲವರು ತೋರಿಸಿಕೊಟ್ಟಿದ್ದಾರೆ. ಹೊಸ ಬೆಳೆ, ಹೊಸ ಕೃಷಿ ಆವಶ್ಯಕ. ಆದರೆ ಕಳೆಯನ್ನು ಬೆಳೆಯೆಂದು ವೈಭವೀಕರಿಸುವುದು ನ್ಯಾಯವಲ್ಲ. ಕಸಿ ಮಾಡಿ ಒಳ್ಳೆಯ ದೊಡ್ಡ ಮಾವಿನ ಹಣ್ಣನ್ನು ಪಡೆಯೋಣ, ಆದರೆ ಬದನಿಕೆಯು ಕಸಿ ಎನಿಸಲಾರದು. ಕಲೆಯ ಭಾಷೆ ತಿಳಿಯದೆ, ಕಲೆಯಲ್ಲಿ 'ಭಾಷಾಂತರ' ಪ್ರಯೋಗ ಆವಾಂತರಕ್ಕೆ ದಾರಿ.

ಪ್ರಾಯೋಗಿಕ ಸುಸಂಬದ್ಧತೆ, ಚೌಕಟ್ಟಿನ ರಕ್ಷಣೆ, ಇವು ಇದ್ದರೆ, ತುಳು ಯಕ್ಷಗಾನ ಪ್ರೋತ್ಸಾಹಕ್ಕೆ ಅರ್ಹವಾದುದು. ಅಂತಹ ಒಂದು ಚಿಂತನಶೀಲ, ಸಂತುಲಿತ, ಸಮನ್ವಿತ ಪ್ರಯೋಗ ಬೆಳೆದು ಬರಲಿ. ಅಂತಹ ಯತ್ನಗಳು ಆದುದುಂಟು. ಹಿಂದೆ ಕದ್ರಿಮೇಳ (1950 ರ ಸುಮಾರಿಗೆ) ಇತ್ತೀಚೆಗೆ ಕರ್ನಾಟಕ ಮೇಳಗಳು ಯಕ್ಷಗಾನ ವೇಷಗಳಿಂದಲೇ ತುಳು ಕಥೆಯನ್ನು ಆಡಿದ್ದಿವೆ. ಅಂತಹ ಪ್ರಯೋಗ ಬೆಳೆದು ಬಾಳಬೇಕು. ಇಲ್ಲವಾದರೆ ವೇಷದೊಂದಿಗೆ, ಉಳಿದ ಅಂಗಗಳೂ ಮರೆಯಾಗಿ, ಯಕ್ಷಗಾನದ 'ನಾಟ್ಯಧರ್ಮಿ'ಯು ತುಳುವಿನ 'ಲೋಕಧರ್ಮಿ' ಯಾಗಿ, ಏನಿದ್ದುದು ಏನಾಗಿ ಹೋಗಬಹುದು. ತುಳು ಕತೆಯನ್ನು ಆಡುವಾಗ, ಪರಂಪರೆಯ ವೇಷಗಳನ್ನು ಬೆಳಸುವುದಕ್ಕೆ ಪ್ರೇಕ್ಷಕರ ಆಕ್ಷೇಪ ಬರುವುದಂತೂ ಶಕ್ಯವಿಲ್ಲ. ಪ್ರಯತ್ನ, ದೃಢನಿರ್ಧಾರದತ್ತ ನಾವು ಮನಸ್ಸು ಮಾಡಬೇಕು, ಅಷ್ಟೆ.

ಪರಿವರ್ತನೆಯು ಎಲ್ಲ ಕಲೆಗಳಲ್ಲೂ ಆಗಿದೆ. ಆದರೆ ಅದು ನಿಧಾನವಾಗಿ ಕಲೆಯ ಇತಿಹಾಸದ ಗತಿಯಲ್ಲಿ ಬಂದಿದೆ. ವ್ಯಾಪಾರೀ ಲಾಭಕ್ಕಾಗಿ ಆದ ಬದಲಾವಣೆ ಅದಲ್ಲ. ಇದೀಗ ತೀವ್ರಗತಿಯಲ್ಲಿ ಆಧುನಿಕ ಸನ್ನಿವೇಶ, ವ್ಯಾಪಾರೀ ಅವಶ್ಯಕತೆ ಯನ್ನು ಮಾತ್ರ ಪೂರೈಸುವ ದೃಷ್ಟಿಗಳ ಮಧ್ಯೆ ಯಕ್ಷಗಾನದಂತಹ ಕಲೆಯ ರಕ್ಷಣೆ ಹೆಚ್ಚು ಕಷ್ಟದ್ದಾಗಿದೆ.
_______________________________________________________________________ [ತೆಂಕುತಿಟ್ಟು ಯಕ್ಷಗಾನ ಹಿತರಕ್ಷಣಾ ವೇದಿಕೆ, ಸುಳ್ಯ - ಇವರು 24-6-1984 ರಂದು ಏರ್ಪಡಿಸಿದ ವಿಚಾರಗೋಷ್ಠಿಯಲ್ಲಿ ಮಂಡಿಸಿದ ಪ್ರಬಂಧದ ಪರಿಷ್ಕೃತ ರೂಪ.]