ಈ ಪುಟವನ್ನು ಪ್ರಕಟಿಸಲಾಗಿದೆ

80/ ಕೇದಗೆ

ಪ್ರಸಂಗಗಳ ಒತ್ತು ವೈಷ್ಣವ ಮತದ ಕಡೆಗಿದೆ. ಇದರಿಂದಾಗಿಯೇ ಇರಬೇಕು, ನಾಯಕ ಪಾತ್ರಗಳು ಊರ್ಧ್ವನಾಮವನ್ನೂ ಖಳನಾಯಕ ವರ್ಗದ ಪಾತ್ರಗಳು, ಬಣ್ಣದ ವೇಷಗಳು ಅಡ್ಡನಾಮವನ್ನೂ ಧರಿಸುತ್ತವೆ. (ಇದಕ್ಕೆ ಅಪವಾದಗಳೂ ಇವೆ.) ಇಲ್ಲಿ ಗಮನಿಸಬೇಕಾದ ಒಂದು ಸಂಗತಿಯೆಂದರೆ ಬಡಗುತಿಟ್ಟಿನ ವೇಷಗಳ ಊರ್ಧ್ವನಾಮಗಳು ಮಾಧ್ವ ಸಂಪ್ರದಾಯವನ್ನೂ, ತೆಂಕುತಿಟ್ಟಿನ ವೇಷಗಳು ಶ್ರೀ ವೈಷ್ಣವರ U. V ನಾಮಗಳನ್ನೂ ಹೋಲುತ್ತವೆ. ಇದು ಅಲಂಕರಣದ ಚಿತ್ರಗಾರಿಕೆಯಿಂದ ಬೆಳೆದಿರಲೂಬಹುದು. ಆದರೆ 13ನೇ ಶತಮಾನದಲ್ಲಿ ನರಹರಿತೀರ್ಥ ಯತಿಗಳು ಉಡುಪಿಯಲ್ಲಿ ಒಂದು ಮೇಳವನ್ನು ನಡೆಸಿದ್ದರೆಂದು ಬನ್ನಂಜೆ ಗೋವಿಂದಾಚಾರರು ತಿಳಿಸುತ್ತಾರೆ. ಹೀಗೆ ಬಡಗುತಿಟ್ಟಿಗೆ ಮಾಧ್ವ ಪ್ರಭಾವ ಬಿದ್ದಿರಬೇಕು. ತೆಂಕುತಿಟ್ಟಿನ ಕೇಂದ್ರವಾದ ಕುಂಬಳೆಗೂ, ತಿರುಪತಿಗೂ ಹಿಂದೆ ಬಹಳ ಸಂಬಂಧವಿತ್ತಂತೆ, ತಿರುಪತಿ ದಾಸರಿಗೆ ನೀಡಿದ ಉಂಬಳಿಯೇ ಕುಂಬಳೆ ಬಳಿಯ ಮಾನ್ಯ ಗ್ರಾಮವಂತೆ. (ಮಾನ್ಯವೆಂದರೆ ಉಂಬಳಿ) ಇದು ಕುಕ್ಕಿಲ ಕೃಷ್ಣ ಭಟ್ಟರು ನೀಡಿದ ಮಾಹಿತಿ, ಹಾಗಿದ್ದರೆ ತೆಂಕಿನ ವೇಷಗಳ ಮೇಲೆ ಶ್ರೀ ವೈಷ್ಣವರ ಪ್ರಭಾವ ಹೀಗೆ ಬಂದಿರಲೂಬಹುದು. ತೆಂಕುತಿಟ್ಟಿನಲ್ಲಿ ಬಳಕೆಯಲ್ಲಿರುವ ಮೂರು, ನಾಲ್ಕು, ಆರು ಗೀರುಗಳ ನಾಮಗಳು ಮುಖಕ್ಕೆ ಶೋಭೆ, ಚಿತ್ರಕ್ಕೆ ಸಮತೋಲ, ವೇಷಭೂಷಣಗಳಿಗೆ ಹೊಂದಿಕೆಯನ್ನೂ ಒದಗಿಸುತ್ತವೆ

ಯಕ್ಷಗಾನದ ಮುಖವರ್ಣಿಕೆಗಳು ವಾಸ್ತವ ದೃಷ್ಟಿಯ ಸೃಷ್ಟಿಗಳಾಗಿರದೆ, ಕಾಲ್ಪನಿಕ, ಸಾಂಕೇತಿಕದೃಷ್ಟಿಯ ಪ್ರೌಢಚಿತ್ರಕಲೆಯ ಮಾದರಿಗಳು. ಪಾತ್ರಗಳ ಸ್ವಭಾವ, ಸ್ಥಾನಮಾನಗಳ ಬಗೆಗೆ ಇವು ವಿಶೇಷ ಗಮನ ನೀಡಿವೆ. ಅರ್ಜುನನಿಗೆ ಪೀಠಿಕೆ ವೇಷ (ನಾಯಕ)ದ ಮುಖವರ್ಣಿಕೆ, ಭೀಮನಿಗೆ ರೌದ್ರಪ್ರಕೃತಿಯ ಬಣ್ಣದ ವೇಷದ ಹಾಗೂ ಕಂಸ, ಜರಾಸಂಧರು ಕ್ಷತ್ರಿಯರಾದರೂ ಅವರಿಗೆ ಬಣ್ಣದ ವೇಷದ ವರ್ಣಿಕೆಗಳಿರುವುದನ್ನು ಇಲ್ಲಿ ಗಮನಿಸಬಹುದು. ಮುಖವರ್ಣಿಕೆಯನ್ನು ನೋಡಿ ಇದು ಇಂತಹ ಪಾತ್ರವೆಂದು ಗುರುತಿಸುವಂತೆ, ಅವುಗಳ ರಚನೆಗಳಿವೆ. ಮಧ್ಯಯುಗೀನ ಮುಖಾಲಂಕಾರದ ಅಂದಗಳನ್ನಾಧರಿಸಿ, ಅವಕ್ಕೆ ಕಲಾರೂಪ ನೀಡಿ ಶೈಲಿಬದ್ಧಗೊಳಿಸಿ (Stylise) ಬೆಳೆಸಿದ ಆ ರಚನೆಗಳು ಆಳವಾದ ಅಭ್ಯಾಸಕ್ಕೆ ಅರ್ಹವಾಗಿವೆ.

"ತತ್ರಾಪಿ ಚತುರ್ಥೋಂಕಃ" ಎಂಬ ಹಾಗೆ ಯಕ್ಷಗಾನದ ಬಣ್ಣಗಾರಿಕೆಯಲ್ಲೂ ಬಣ್ಣದ ವೇಷವೆಂಬ ಖಳಪಾತ್ರಗಳ ವರ್ಣಿಕೆ ಜಗತ್ತಿನ ಕಲೆಗೇ ಒಂದು ವಿಶಿಷ್ಟ ಕೊಡುಗೆ. ಬಣ್ಣದ ವೇಷಕ್ಕೆ ಮೂಲ ಲೇಪನ (base make up) ಇಲ್ಲ.