ಈ ಪುಟವನ್ನು ಪ್ರಕಟಿಸಲಾಗಿದೆ

ಈ ಧರ್ಮವು ಚೋದನಾತ್ಮಕವಾದುದು ; ಎಂದರೆ ಇದೇ ಎಲ್ಲರನ್ನೂ ಕಾರ್ಯಪರರನ್ನಾಗಿ ಮಾಡುವುದು. ತಾನು ಮಾಡಬೇಕಾದ ಕಾರ್ಯವೊಂದುಂಟು ಎಂದು ಮಾನವನಿಗೆ ತೋರುವುದು ಇದೆಯಲ್ಲವೆ ? ಇದೇ ಚೋದನೆಯು.

ಲೋಕದಲ್ಲಿರುವ ನೀರೆಲ್ಲವೂ ಮಳೆಯಿಂದಲೇ ಬಂದುದು. ಹಾಗೆಯೇ ಒಳ್ಳೆಯದಾಗಲಿ, ಕೆಟ್ಟುದಾಗಲಿ, ಎಲ್ಲಕ್ಕೂ ಧರ್ಮವೇ ಚೋದಕವು. ನೀರು ಮೇಲಿನಿಂದ ಇಳಿಯುವಾಗ ಅದರಲ್ಲಿ ವಾಸನೆಯಾಗಲಿ ರುಚಿಯಾಗಲಿ ಇಲ್ಲದಿದ್ದರೂ, ಭೂಮಿಯಲ್ಲಿ ರುಚಿಯೂ ವಾಸನೆಯೂ ಇಲ್ಲದಿರುವ ನೀರೂ ಉಂಟೇನು! ಹಾಗೆ ಧರ್ಮವೇ ಪ್ರೇರಿಸಿದ್ದರೂ ಕಾರ್ಯವು ಆಗುವಾಗ ಕಾರ್ಯಕರ್ತನಲ್ಲಿರುವ ಸತ್ತ್ವರಜಸ್ತಮೋಗುಣಗಳ ಸಂಸರ್ಗದಿಂದ ಧರ್ಮಾಧರ್ಮಗಳು ಏರ್ಪಡುವುದು. ಲೋಕದ ಸುಸ್ಥಿತಿಯನ್ನು ಕಾಪಾಡಲು ಶಕ್ತವಾದುದು, ಕರ್ತೃವಿನ ಅಂಶವು ಆದಷ್ಟು ಕಡಿಮೆಯಾಗಿರುವುದು, ಪುಣ್ಯಫಲಪ್ರದವಾಗಿದ್ದು, ಇತರರಿಗೂ ತನಗೂ ಸಂತೋಷವನ್ನು ಕೊಡುವುದು ಯಾವುದೋ ಅದೆಲ್ಲವೂ ಧರ್ಮವು. ಇದಕ್ಕೆ ವಿರುದ್ಧವಾದುದೆಲ್ಲ ಅಧರ್ಮವು.

ಧರ್ಮವು ಬೇಕು ಎನ್ನುವವನು ಮೊದಲು ಅಂತರಂಗಶುದ್ಧಿಯನ್ನು ಸಂಪಾದಿಸಬೇಕು. ಶುದ್ಧವಲ್ಲದ ಅಂತರಂಗದಲ್ಲಿ ತೋರುವುದೆಲ್ಲ ಅಧರ್ಮವೇ. ಅಂತರಂಗ ಶುದ್ಧಿಯು ದೇಹವೂ ಮನಸ್ಸೂ ಸರಿಯಾಗಿರುವಾಗ ಮಾತ್ರ ಸಾಧ್ಯವು. ಆದುದರಿಂದ ಆಹಾರ, ವಿಹಾರ, ವಿಚಾರ, ವ್ಯವಹಾರ, ನಾಲ್ಕೂ ಶುದ್ಧಿಯಾಗಿದ್ದರೆ ಮಾತ್ರ ಅಂತರಂಗಶುದ್ಧಿಯು. ಅದರಿಂದ ಧರ್ಮಕಾಮನಾದವನು ಈ ನಾಲ್ಕರಲ್ಲೂ ವಿವೇಕವುಳ್ಳವನಾಗಬೇಕು. ವಿವೇಕವೆಂದರೆ ಸತ್ತ್ವಗುಣವನ್ನು ಪೋಷಿಸಿ ಮಿಕ್ಕೆರಡನ್ನೂ ತುಳಿಯುವಂತಹ ಬೇಕುಬೇಡಗಳ ಜ್ಞಾನ. ಇದನ್ನು ಸಂಪಾದಿಸಿಕೊಳ್ಳಲು ಎರಡು ಹಾದಿ; ಒಂದು ತನ್ನ ಅನುಭವವೆಂಬ ಕಷ್ಟದ ಹಾದಿ. ಇನ್ನೊಂದು ಬಲ್ಲವರ ಉಪದೇಶವೆಂಬ ಸುಲಭದ ಹಾದಿ. ಆ ಉಪದೇಶವೂ ಸ್ವಾರ್ಥವಿಲ್ಲದೆ ರೋಗನಿವಾರಕವಾದ ಔಷಧದಂತೆ ಅನುಭವಸಿದ್ಧವಾಗಿದ್ದರೆ ಮಾತ್ರ ಶಾಸ್ತ್ರವಾಗುವುದು.

ಈ ಧರ್ಮವನ್ನು ಆಚರಿಸುತ್ತಿರುವವರಿಗೆ ಸತ್ಯದ ಸ್ಥಿರರೂಪವು ಗೋಚರವಾಗುವುದು.

ಸತ್ಯವು ನೇರವಾಗಿ ಏಕೆ ತಿಳಿಯಬಾರದು ಎನ್ನುವಿರೇನೋ ? ಹಾಲು ಇಟ್ಟಿದ್ದ ಕಡೆಯೇ ಕೆನೆಕಟ್ಟುವಂತೆ ಮನಸ್ಸು ಬುದ್ಧಿಗಳು ತಮ್ಮ ಅಲ್ಪತ್ವದಿಂದ ಅಜ್ಞಾನದ ಮುಸುಕನ್ನು ಎಳೆದುಕೊಳ್ಳುತ್ತಿರುವುವು. ಆಗ ಸತ್ಯವು ಎದುರು ನಿಂತರೂ