ಈ ಪುಟವನ್ನು ಪ್ರಕಟಿಸಲಾಗಿದೆ

ಕಳುಹಿಸಿ, ಇದುವರೆಗೆ ಅಲ್ಲಿದ್ದು ಆಯಾಸಪಟ್ಟಿರುವ ದಳವನ್ನು ಹಿಂದಕ್ಕೆ ಕರೆಯಿಸಿಕೊಂಡು ಈತನ ಕೈಕೆಳಗೆ ಹೊಸ ದಳವನ್ನು ಕಳುಹಿಸಿಕೊಡಿ.”

“ಈ ದಳವು ಸಾಲದೆ ಹೋಗಬಹುದು.”

“ಮಂತ್ರಿಗಳೇ, ಗೆಲ್ಲುವುದು ದಳವಲ್ಲ, ದಳಪತಿ. ಈತನನ್ನು ಅಲ್ಪದಳ ಕೊಟ್ಟು ಕಳುಹಿಸುವುದರಲ್ಲಿ ನಮಗೆ ಬಹಳ ಪ್ರಯೋಜನವುಂಟು. ದುರ್ದಾಂತವಾಗಿರುವ ಈತನ ಕದನಕುತೂಹಲವು ಅಂಕೆಗೆ ಬಂದರೆ ನಮಗೂ ಶೂರನೂ ಅನುಭವಿಯೂ ಆದ ದಂಡನಾಯಕನೊಬ್ಬನು ಲಭಿಸುವನು. ಈತನ ರಾಜ್ಯದ ನೆರೆಹೊರೆಯು ಸುಖವಾಗಿರುವುದು. ಆತನಿಗೆ ಬೇಕುಬೇಕಾದ ಸಿದ್ಧತೆಗಳನ್ನೆಲ್ಲಾ ಮಾಡಿಕೊಟ್ಟು ಆತನನ್ನು ಕಳುಹಿಸಿ. ಸೈನ್ಯವು ಮಾತ್ರ ನಾವು ಹೇಳಿದಷ್ಟೇ! ಏನೆನ್ನುವೆ?”

“ಮಹಾಸ್ವಾಮಿಯವರ ಮಾತು ನಿಜ. ಗೆಲ್ಲುವುದು ದಳವಲ್ಲ. ಅಷ್ಟೇ ಸೈನ್ಯವು ಸಾಕು. ನನ್ನ ಉತ್ಸಾಹವನ್ನು ಸೈನಿಕರಲ್ಲಿ ತುಂಬಿ ಗೆದ್ದು ಬರುವೆನು ಮಹಾಸ್ವಾಮಿ!” ಅರಸನ ಅಪ್ಪಣೆಯಾಯಿತು. ಆತನಿಗೆ ತೊಡಿಸಿದ್ದ ಅಪರಾಧಸೂಚಕವಾದ ವಸ್ತ್ರವನ್ನು ತೆಗೆದು ಪರಿಜನರು ಅಲ್ಲಿಯೇ ಆತನಿಗೆ ನೂತನ ಪದವಿಯನ್ನು ಸೂಚಿಸುವ ಉಡುಗೊರೆಯನ್ನು ತಂದು ತೊಡಿಸಿದರು. ಅರಸನು ತನ್ನ ಹಸ್ತದಿಂದಲೇ ವೀರತಾಂಬೂಲವನ್ನು ಕೊಟ್ಟು ಸಂಭಾವಿಸಿ ಕಳುಹಿಸಿಕೊಟ್ಟನು.

* * * *