ಈ ಪುಟವನ್ನು ಪ್ರಕಟಿಸಲಾಗಿದೆ

“ಈ ಅರ್ಥದಲ್ಲಿ ನೀನು ಸ್ವತಂತ್ರನು.”

“ಸಂತೋಷ. ತಾವು ಇಂದ್ರಪದವಿಯು ಶೂನ್ಯವಾಗಿದೆಯೆಂದಿರಿ. ನಾವು ಮಧ್ಯಲೋಕದವರು. ನಮಗೆ ಏನೂ ತಿಳಿಯದು. ಅದರಿಂದ ಕೇಳುವೆನು. ಆ ವಿಚಾರವನ್ನು ವಿಸ್ತಾರವಾಗಿ ಕೇಳಬಹುದೆ ?”

ಬೃಹಸ್ಪತಿಯು ನಡೆದುದೆಲ್ಲವನ್ನೂ ಹೇಳಿ, “ವೃತ್ರಹತ್ಯೆಗಾಗಿ ಇಂದ್ರನು ದೇವಲೋಕವನ್ನು ಬಿಡಬೇಕಾಯಿತು” ಎಂದು ಹೇಳಿದನು. ಹಾಗೆಯೇ ಇಂದ್ರನಾಗುವವನಿಗೆ ಅವನು ಅಪೇಕ್ಷಿಸಿದುದನ್ನು ಕೊಡುವುದಾಗಿಯೂ ಹೇಳಿದನು.

ನಹುಷನು ಸಾವಧಾನವಾಗಿ ಯೋಚಿಸಿ ಹೇಳಿದನು: “ಬಂದಿರುವ ತಾವೆಲ್ಲರು ಪೂಜ್ಯರು. ನನಗಿಂತ ದೊಡ್ಡವರು. ಅದರಿಂದ ನಾನು ಹೇಳುವುದನ್ನು ತಾವು ಸಾವಧಾನವಾಗಿ ಪರ್ಯಾಲೋಚಿಸಬೇಕು. ನಾವು ಮನುಷ್ಯವರ್ಗದವರು. ದೇವಋಷಿ ಪಿತೃಗಣಗಳಿಗಿಂತ ಕೀಳಾದವರು. ನಾವು ತಮ್ಮ ಮೇಲಿನ ಅಧಿಕಾರವನ್ನು ವಹಿಸಿಕೊಳ್ಳುವುದೆಂತು ? ತಾವು ನಮಗೆ ವರಪ್ರದಾನ ಮಾಡುವವರು. ತಮ್ಮನ್ನು ಕಂಡರೆ ನಾವು ಅಂಜುವೆವು. ತಾವು ಅನುಗ್ರಾಹಕರು. ನಾವು ಅನುಗ್ರಾಹ್ಯರು. ಹೀಗಿರುವಲ್ಲಿ ನಾವು ತಮ್ಮ ಮೇಲೆ ಅಧಿಕಾರವನ್ನು ಚಲಾಯಿಸಲು ಸಾಧ್ಯವೇ ? ತಾವೇ ಯೋಚಿಸಿ ನೋಡಿ.”

ದೇವಋಷಿಪಿತೃಗಳು ಒಬ್ಬರನ್ನೊಬ್ಬರು ನೋಡಿಕೊಂಡರು. ನಹುಷನು ಹೇಳುವುದು ಸರಿ. ಏನು ಮಾಡಬೇಕು ?

ಪಿತೃಗಣದ ಪ್ರತಿನಿಧಿಯು ಹೇಳಿದನು : “ಮಾನವೇಂದ್ರ, ನೀನು ಹೇಳುವುದು ಸರಿ. ಪ್ರತಿಯೊಂದು ಜಂತುವಿಗೂ ಅದರದರ ಅಧಿಕಾರವ್ಯಾಪ್ತಿಯಿಷ್ಟು ಎಂದು ಮಿತಿಯಿರುವುದು. ಮಿತಿಯ ಎರಡು ಕೊನೆಗಳಲ್ಲಿ ಒಂದು ಕನಿಷ್ಠಾವಧಿ, ಇನ್ನೊಂದು ಪರಮಾವಧಿ ; ಅದು ಸಹಜವಾದುದು. ಅದಕ್ಕೆ ಯಾರೇನು ಮಾಡುವುದು ?”

“ತಾವು ನನಗಿಂತ ಶ್ರೇಷ್ಠರು ಎಂಬುದನ್ನು, ಸಮಸ್ಯೆಯನ್ನು ಸರಿಯಾಗಿ ನಿರ್ವಚಿಸಿ ತೋರಿಸಿಕೊಂಡಿರಿ. ನಾನು ಹೇಳುವುದೂ ಅದೆ! ನಮ್ಮ ಪರಮಾವಧಿಯ ಮಿತಿಯಲ್ಲಿ ತಾವು ಸೇರಿದವರಲ್ಲ. ಅದರಿಂದ ಅಧಿಕಾರವು ಸಾಧ್ಯವಲ್ಲ.”

ಮತ್ತೆ ಸುರಾಚಾರ್ಯನು ಹೇಳಿದನು ; ಚಕ್ರವರ್ತಿ, ನಿನ್ನ ಆಕ್ಷೇಪಣೆಯು ಸಾಧುವಾದುದು. ಯಾವ ಪ್ರಾಣಿಯ ಇತಿಮಿತಿಯನ್ನು ಬೇಕಾದರೂ ಪಿತೃಗಳು ಬದಲಾಯಿಸಬಲ್ಲರು. ಪಿತೃಗಳು ನಿನ್ನ ಮಾನವತ್ವವನ್ನು ತೆಗೆದು ಅಲ್ಲಿ ದೇವತ್ವವನ್ನು ಸ್ಥಾಪಿಸುವರು.

“ದೇವತ್ವವನ್ನು ಪಡೆದೆನೆನ್ನುವುದು ನನಗೆ ಹೇಗೆ ತಿಳಿಯುವುದು ?”