ಈ ಪುಟವನ್ನು ಪ್ರಕಟಿಸಲಾಗಿದೆ

ದೇವಗುರುವು ಇಷ್ಟವಿಲ್ಲದಿದ್ದರೂ ಸಭೆಯ ನಿರ್ಣಯವನ್ನು ಅಂಗೀಕರಿಸಬೇಕಾಯಿತು. ಸಭೆಯು ಈ ನಿರ್ಣಯವನ್ನು ಹೊಸ ಇಂದ್ರನಿಗೂ ಶಚೀದೇವಿಗೂ ಕಳುಹಿಸುವ ಭಾರವನ್ನು ದೇವಗುರುಗಳಿಗೆ ಒಪ್ಪಿಸಿತು. ಹಾಗೆಯೇ ಆ ನಿರ್ಣಯದಂತೆ ವ್ಯಕ್ತಿಗಳು ನಡೆಯುವಂತೆ ನೋಡಿಕೊಳ್ಳುವ ಭಾರವನ್ನೂ ಆತನಿಗೇ ವಹಿಸಿತು.

ಬೃಹಸ್ಪತಿಯು ಚಿಂತಾಭಾರದಿಂದ ಕುಗ್ಗಿದವನಂತೆ ನಿಧಾನವಾಗಿ ಮಂದಿರಕ್ಕೆ ಬಂದನು. ಆತನಿಗೆ ಆವೊತ್ತು ರಥವೇರಿ ಬರುವುದಕ್ಕೂ ಇಷ್ಟವಿಲ್ಲ. ದಾರಿಯುದ್ದಕ್ಕೂ ಒಂದೇ ಯೋಚನೆ; “ಛೇ, ಅವಿವೇಕವಾಯಿತು. ಈಗ ಶಚಿಯನ್ನೇನೋ ದೇವಸಭೆಯು ಇಂದ್ರನಿಗೆ ಕೊಟ್ಟುಬಿಟ್ಟಿತು. ಆದರೆ ಆಕೆ ಒಪ್ಪುವಳೇ? ಆಕೆಯು ಆಗುವುದಿಲ್ಲವೆಂದರೆ ಸಭೆಯ ನಿರ್ಣಯವೇನಾಗಬೇಕು? ಏನು ದನವೇ? ಹೊಡೆದು, ಬಡಿದು, ಎಳೆದುಕೊಂಡು ಹೋಗಿ ಮತ್ತೊಂದು ಮನೆಯಲ್ಲಿ ಕಟ್ಟಿ ಬರೋಣವೆನ್ನುವುದಕ್ಕೆ ? ನಿಜವಾಗಿಯೂ ಇದರಿಂದ ಏನೋ ಅನರ್ಥವಾಗಲಿದೆ. ಅಥವಾ ನಾನೇಕೆ ಇಷ್ಟು ಯೋಚಿಸಲಿಲ್ಲ? ಎಲ್ಲರ ಹೃದಯದಲ್ಲೂ ಕುಳಿತು ಆಟವಾಡಿಸುವ ಆ ಮಹಾವಿಷ್ಣುವಿನದು ಈ ಕೆಲಸ. ಆತನು ಮಾಡಿದಂತಾಗಲಿ.”

ಹೋಗುತ್ತಿದ್ದ ದೇವಾಚಾರ್ಯನು ಹಾಗೆಯೇ ನಿಂತನು : “ತಡೆ, ಇದನ್ನೇ ಏಕೆ ಹಳೆಯ ಇಂದ್ರನನ್ನು ಹಿಂತಿರುಗಿ ಕರೆದು ತರಲು ಉಪಯೋಗಿಸಿ ಕೊಳ್ಳಬಾರದು! ಹೌದು. ಶಚಿಯು ಏನಾದರೂ ಮಾಡಿ ಈ ಇಂದ್ರನಿಂದ ಒಂದು ಅವಧಿಯನ್ನು ಪಡೆಯಬೇಕು. ಅಷ್ಟರೊಳಗೆ ಇಂದ್ರನೆಲ್ಲಿರುವನೋ ಕಂಡುಹಿಡಿಯಬೇಕು. ಆತನು ಮತ್ತೆ ಪವಿತ್ರನಾಗುವಂತೆ, ಆತನಿಗೆ ಈಗ ಬಂದಿರುವ ಹತ್ಯೆಯಿಂದ ಬಿಡುಗಡೆಯಾಗುವಂತೆ ಏನಾದರೂ ಮಾಡಿಸಬೇಕು. ಆದರೆ, ಇದು ನನಗೆ ಏನೂ ತಿಳಿಯದಂತೆ ಇರಬೇಕು. ಇಲ್ಲವಾದರೆ ಈ ಇಂದ್ರನು ಕೇಳಿದರೆ ಹೇಳಲೇಬೇಕಾಗುವುದು ಸರಿ” ಎಂದು ತಲೆದೂಗುತ್ತ ಮತ್ತೆ ಉತ್ಸಾಹಗೊಂಡು ಮಂದಿರಕ್ಕೆ ಬಂದನು.

ಆತನು ಮಂದಿರಕ್ಕೆ ಬರುತ್ತಿದ್ದ ಹಾಗೆಯೇ ಪ್ರಹರಿಯು ಬಂದು ವಂದಿಸಿ “ಶಚೀದೇವಿಯು ದರ್ಶನಕ್ಕೆ ಬಂದಿದ್ದಾರೆ” ಎಂದನು. ಬೃಹಸ್ಪತಿಯು “ಒಳ್ಳೆಯದಾಯಿತು” ಎಂದು ನೇರವಾಗಿ ಆಕೆಯನ್ನು ನೋಡಲು ಹೋದನು.

ಶಚೀದೇವಿಯು ಇಂದ್ರನು ಓಡಿಹೋದಾಗಿನಿಂದ ಭೂಮಿಗೆ ಇಳಿದು ಹೋಗಿದ್ದಳು. ದೇವತೆಗಳು ಇಂದ್ರನನ್ನು ಪಿಶಾಚಗ್ರಸ್ಥರಾದಂತೆ ಹುಡುಕಿದುದು, ಮೂರು ಲೋಕಗಳಲ್ಲಿಯೂ ಆತನೆಲ್ಲಿರುವನು ಎಂಬ ಗುರುತೂ ಸಿಕ್ಕುದುದು,