ಈ ಪುಟವನ್ನು ಪ್ರಕಟಿಸಲಾಗಿದೆ

ಕೆಲವು ದಿನ ಮಾತ್ರ’ ಎಂದು ಕಾಲಕ್ಕೆ ಅಂಚು ಕಟ್ಟಿಟ್ಟಂತಾಯಿತು ಎಂದು ವಿಷಣ್ಣನಾಗಿ ಕರದಲ್ಲಿ ಕಪೋಲವನ್ನಿಟ್ಟು ಚಿಂತಿಸಿದನು. ವಿರಜಾದೇವಿಯು ರತ್ನರಾಶಿಯ ಮುಂದೆ ಪೆಚ್ಚಾಗಿರುವ ಏಕರತ್ನದಂತೆ ಸಂಕುಚಿತಮನಸ್ಕಳಾಗಿ, ಎಲ್ಲಾ ವಿಧದಲ್ಲೂ ಸಂಕೋಚಮಾಡಿಕೊಂಡು ಕುಳಿತಿದ್ದಳು.

ಶಚಿಯು ಒಂದೇ ನಿಮಿಷದಲ್ಲಿ ಅರಸನ ಧರ್ಮಸಂಕಟವನ್ನು ತಿಳಿದಳು. ಬೇಟೆಗೆ ಆಳವಾದ ಗಾಯವನ್ನು ಮಾಡಿದ್ದರೂ, ಬೇಟೆಯು ಓಡಿಹೋದರೂ ಬದುಕುವುದಿಲ್ಲವೆಂದು ಗೊತ್ತಾಗಿದ್ದರೂ, ಆಟವಾಡುತ್ತ ಬೇಟೆಯ ಗಾಯಕ್ಕೆ ಮದ್ದು ಬಳಿಯುವ ಬೇಟೆಗಾರನಂತೆ, ಅರಸನ ಮನೋಭಿಪ್ರಾಯವನ್ನು ಬೇರೆಯಾಗಿ ಅರ್ಥಮಾಡಿಕೊಂಡಿರುವ ಮುಗ್ಧೆಯಂತೆ ಹೇಳಿದಳು; “ಇಂದ್ರನು ಸರ್ವಜ್ಯೇಷ್ಠನು. ಎಲ್ಲರನ್ನೂ ಧರ್ಮದಲ್ಲಿ ನಡೆಯುವಂತೆ ಪ್ರೇರಿಸುವವನಾತನು. ಆತನು ಇದು ಧರ್ಮವೆಂದು ಬೇರೆ ದಾರಿಯನ್ನು ತೋರಿಸಿದರೂ ನಾನು ನಡೆಯುವುದಕ್ಕೆ ಸಿದ್ಧಳಾಗಿರುವೆನು !” ಆ ಮಾತಿನಲ್ಲಿ “ನಾನು ಗೆದ್ದೆನು ದಿಗಿಲಿಲ್ಲ” ಎಂಬ ಚತುರೆಯ ನಂಬಿಕೆಯಿತ್ತು. “ಘಾತವು ಮಾರ್ಮಿಕವಾಗಿದೆ. ಬೇಟೆಯಲ್ಲಿ ಗೆದ್ದೆ” ಎಂಬ ಬೇಟೆಗಾರನ ಆತ್ಮಶ್ರದ್ಧೆ ಇತ್ತು.

ಅರಸನು ಶಚೀವಾಕ್ಯಗಳಿಂದ ಮರ್ಮಾಹತನಾಗಿದ್ದರೂ, ರೇಗಿದ್ದರೂ ಕಾರಣಾಂತರಗಳಿಂದ ಶಾಂತವಾಗಿರಬೇಕಾದ ನಾಗರಾಜನಂತೆ ಒಳಗೇ ಪರಿತಪಿಸುತ್ತಿದ್ದಾನೆ. “ಇವಳು ನಾರಿಯಲ್ಲ ಮಾರಿ” ಎನ್ನುವುದು ಮನಸ್ಸಿಗೆ ಚೆನ್ನಾಗಿ ಅರ್ಥವಾಗಿ ಪ್ರತಿಕ್ರಿಯೆ ಮಾಡಬೇಕೆನ್ನುವ ಘಟ್ಟಕ್ಕೆ ಅದು ಏರುತ್ತಿದೆ. ಆದರೂ ತಾನು ಇಂದ್ರ, ಇಂದ್ರನ ಗೌರವಕ್ಕೆ ಚ್ಯುತಿಯಿಲ್ಲದಂತೆ ನಡೆಯಲೇಬೇಕು ಎಂಬ ನಿರ್ಧಾರವು ಎಲ್ಲದಕ್ಕಿಂತ ಬಲವಾಗಿ ಕುಳಿತಿದೆ. ಆದರೂ, ಶಚಿಯು ಅಂತಃಪ್ರಾಣ ಘಾತಿನಿಯಾಗದಿದ್ದರೂ ಬಹಿಃಪ್ರಾಣವಾದ ಅರ್ಥವನ್ನು ಘಾತಿಸುವಳೆಂದು ಪ್ರತ್ಯಕ್ಷವಾಗಿದೆ. ಇನ್ನು ಮಾತೇಕೆ?

ಅರಸನು ಒಂದು ಗಳಿಗೆ ನಿರುತ್ತರನಾಗಿದ್ದು ಹೇಳಿದನು : “ಶಚೀದೇವಿ ಇಂದ್ರನು ಧರ್ಮವಿರೋಧಿಯಲ್ಲ. ಅವರವರು ಧರ್ಮವೆಂದು ಒಪ್ಪಿಕೊಂಡಿರು ವುದನ್ನೇ ಪಾಲಿಸಬೇಕಾದುದು ಇಲ್ಲಿಯ ಧರ್ಮ. ಅದರಿಂದ ನೀನು ಪತಿಯೆಂದು ಗ್ರಹಿಸಿರುವ ಇಂದ್ರನನ್ನು ಪತ್ರೀಕ್ಷಿಸಲು ಕಾಲಾವಧಿಯುಂಟು. ಅದು ನಿನಗೆ ಲಭಿಸಿರುವುದು. ಅಷ್ಟೇ ಅಲ್ಲ. ನಿನ್ನ ಪತಿಯನ್ನು ನೀನು ಹುಡುಕಲೂ ನಿನಗೆ ಅಧಿಕಾರವುಂಟು. ಹುಡುಕು, ಹುಡುಕಿಸು, ಹೋಗಿ ಬಾ” ಎಂದು ಸಮಚಿತ್ತನಾಗಿ ಹೇಳಿದನು.