ಈ ಪುಟವನ್ನು ಪ್ರಕಟಿಸಲಾಗಿದೆ

ಪೂರ್ಣವಾಗುವುದಿಲ್ಲ ಎನ್ನಿಸಿ, ಈ ಆಟಗಳನ್ನೆಲ್ಲ ಹೂಡಿದೆವು. ನೀನು ದಿಗಿಲುಪಡಬೇಡ. ಆತನಿಗೆ ಚ್ಯವನ ಮಹರ್ಷಿಯ ಅನುಗ್ರಹವಿದೆ. ಅದು ಆತನನ್ನು ಧರ್ಮಭ್ರಷ್ಟನನ್ನಾಗಿಸುವುದಿಲ್ಲ. ಅದರಿಂದ ನಿನ್ನ ಪಾತಿವ್ರತ್ಯಕ್ಕೆ ಚ್ಯುತಿಯಿಲ್ಲ. ಮುಂದಿನದೆಲ್ಲ ನಿಮ್ಮಿಂದಲೇ ನಡೆಯಬೇಕಾಗುವುದರಿಂದ ನಾನೇನೂ ಹೇಳುವುದಿಲ್ಲ. ತಿರಸ್ಕರಿಣಿಯನ್ನು ಮಾತ್ರ ಮರೆಯಬೇಡಿ. ಇನ್ನು ನಾನು ಬರುವೆನು” ಎಂದು ಉಪಶ್ರುತಿಯು ಎಲ್ಲರಿಗು ಆಶೀರ್ವಾದ ಮಾಡಿ ಅಂತರ್ಧಾನವಾದಳು.

ಬೃಹಸ್ಪತಿಯು ಮತ್ತೆಯೂ ತಾನೇ ಅನರ್ಥಕಾರಣನಾದೆನೆಂದು ಶಚೀದೇವಿಯ ಮುಖವನ್ನು ನೋಡಿದನು. ಅಗ್ನಿವಾಯುಗಳಿಗೆ ಅದು ತಿಳಿಯಿತು. ಆದರೆ ಪತಿ ದರ್ಶನ ಕುತೂಹಲಳಾಗಿದ್ದ ಶಚೀದೇವಿಗೆ ಮಾತ್ರ ಅದು ಗೊತ್ತಾಗಲಿಲ್ಲ.

ಒಂದು ಗಳಿಗೆ ಯಾರೂ ಮಾತನಾಡಲಿಲ್ಲ. ಪ್ರತಿಯೊಬ್ಬರೂ ತಮ್ಮತಮ್ಮ ಯೋಚನೆಯಲ್ಲಿದ್ದರು. ಆಚಾರ್ಯನಿಗೆ ‘ಹಾಗಾದರೆ ಈ ಅನರ್ಥವೂ ತನ್ನಿಂದಲೇ ಆಯಿತೋ? ಮೊದಲಿನಿಂದಲೂ ನಾನೇ ಅನರ್ಥಕಾರಿಯಾದಂತಾಯಿತಲ್ಲ?’ ಎಂದು ಯೋಚನೆ. ಅಗ್ನಿಗೆ ‘ನೋಡಿದೆಯೋ? ತನ್ನ ಪಾಡಿಗೆ ತಾನು ಸುಖವಾಗಿದ್ದ ಮಾನವೇಂದ್ರನಿಗೆ ಆಸೆ ತೋರಿಸಿ ಸ್ವರ್ಗಕ್ಕೆ ಕರೆತಂದು ತಪ್ಪು ದಾರಿ ಹಿಡಿಸಿದಂತಾಯಿತಲ್ಲಾ?’ ಎಂದು ಯೋಚನೆ. ವಾಯುವಿಗೆ, ‘ಉಪಶ್ರುತಿಯ ಮಾತಿನಂತೆ ನಾವು ಯಾರೂ ಸ್ವತಂತ್ರರಲ್ಲ. ನಮ್ಮನ್ನು ಕುಣಿಸುವವನು ಇನ್ನೊಬ್ಬನಿದ್ದಾನೆ ಎಂದ ಮೇಲೆ ನಾವು ನಾವು ಎಂದು ಕುಪ್ಪಳಿಸುವುದಕ್ಕಿಂತ ಇನ್ನೂ ಹುಚ್ಚುತನವು ಉಂಟೆ?’ ಎಂದು ಗಾಢಯೋಚನೆ. ಶಚಿದೇವಿಗೆ ‘ಮೂರು ಲೋಕವಾಳುವ ಇಂದ್ರನನ್ನೂ ಅಂಜಿಸುವ ಹತ್ಯೆಯೆಂದರೆ, ಅದರ ಬಲವಿನ್ನೆಷ್ಟು ಇರಬೇಕು? ಅದನ್ನು ಇಲ್ಲವೆನ್ನಿಸುವುದು ಹೇಗೆ?’ ಎಂದು ಅಗಾಧ ಯೋಚನೆ.

ಒಂದು ಗಳಿಗೆಯಾದ ಮೇಲೆ ಎಲ್ಲರೂ ಸೇರಿ ಇತ್ಯರ್ಥಮಾಡಿದರು: ‘ಅಗ್ನಿ ವಾಯುಗಳ ರಕ್ಷಣೆಯಲ್ಲಿ ತಿರಸ್ಕರಿಣಿಯೊಡನೆ ಶಚಿಯು ಇಂದ್ರನನ್ನು ನೋಡಿ ಬರುವುದು. ಬೃಹಸ್ಪತಿಯು ಬ್ರಹ್ಮಲೋಕಕ್ಕೆ ಹೋಗಿ ಪಿತಾಮಹನ ಅಪ್ಪಣೆ ಪಡೆದು ವೈಕುಂಠಕ್ಕೆ ಹೋಗಿ ಮಹಾವಿಷ್ಣುವಿನ ದರ್ಶನಮಾಡಿ ಇಂದ್ರಶುದ್ಧಿಯ ಉಪಾಯವನ್ನು ತಿಳಿದುಬರುವುದು” ಎಂದು.

* * * *