ಈ ಪುಟವನ್ನು ಪ್ರಕಟಿಸಲಾಗಿದೆ

೧.ಅಕಾಲದ ಅನರ್ಥ

ದೇವಾಧೀಶ್ವರನಾದ ಇಂದ್ರನು ಶಚೀಸಮೇತನಾಗಿ ದೇವಸಭೆಯಲ್ಲಿ ಸಿಂಹಾಸನದಲ್ಲಿ ಕುಳಿತು ವಿರಾಜಿಸುತ್ತಿದ್ದಾನೆ. ದೇವತೆಗಳು, ಋಷಿಗಳು, ತಮ್ಮ ತಮ್ಮ ಪುಣ್ಯಕರ್ಮಗಳಿಂದ ಸ್ವರ್ಗಲೋಕವನ್ನು ಸಾಧಿಸಿದವರು, ಎಲ್ಲರೂ ಸ್ವಸ್ಥಾನಗಳನ್ನು ಅಲಂಕರಿಸಿದ್ದಾರೆ. ಒಂದು ಕಡೆ ಅಪ್ಸರೆಯರೂ, ಗಂಧರ್ವರೂ ನರ್ತನ ಸಂಗೀತಗಳಿಂದ ಆ ಸಭೆಯನ್ನು ಆರಾಧಿಸುತ್ತಿದ್ದಾರೆ. ಇನ್ನೊಂದು ಕಡೆ ಚತುರ್ವೇದಗಳೂ ಮೂರ್ತಿಮತ್ತಾಗಿ ನಿಂತು ವೇದಾಧ್ಯಯನ ಮಾಡುತ್ತ ಆ ದೇವಸಭೆಯನ್ನೆಲ್ಲಾ ಆಶೀರ್ವಾದಮಾಡುತ್ತಿದೆ. ಮರುತ್ತರು, ವಸುಗಳು, ರುದ್ರರು ಮೊದಲಾದವರು ಗಣಗಣಗಳಾಗಿ ನಿಂತು ಇಂದ್ರನನ್ನು ಓಲಗಿಸುತ್ತಿದ್ದಾರೆ. ದಿವ್ಯಾಯುಧಗಳೆಲ್ಲವೂ ದೇವೇಂದ್ರನ ಸಿಂಹಾಸನದ ಹಿಂದೆ ನಿಂತು ತೇಜೋವಿರಾಜಮಾನವಾಗಿ ಆತನಿಗೆ ರಕ್ಷೆಯನ್ನು ನೀಡುತ್ತಿವೆ. ಧರ್ಮಾರ್ಥಕಾಮಗಳೆಂಬ ತ್ರಿವರ್ತಗಳೂ ಕಾಮಧೇನು, ಕಲ್ಪವೃಕ್ಷ, ಚಿಂತಾಮಣಿಗಳೂ ಸರ್ವಸಿದ್ಧಿಗಳೂ ಎಡದಲ್ಲಿ ನಿಂತು ಪರಾಕು ಹೇಳುತ್ತಿವೆ. ಇಂದ್ರನಂತೆಯೇ ಲೋಕಪಾಲಕರೂ ತಮ್ಮ ತಮ್ಮ ಪತ್ನಿಯರೊಡಗೂಡಿ ದೇವರಾಜನ ಸಿಂಹಾಸನದ ಬಲಗಡೆಯಲ್ಲಿ ಮಂಡಿಸಿದ್ದಾರೆ. ಎಲ್ಲರ ದೇಹದಿಂದಲೂ ಹೊರಡುತ್ತಿರುವ ಸಹಜವಾದ ಸುವಾಸನೆಯು ಅವರವರು ಧರಿಸಿರುವ ಪುಷ್ಟಮಾಲೆಗಳ ಗಂಧದೊಡನೆ ಸೇರಿ ಸಭೆಯನ್ನೆಲ್ಲಾ ವ್ಯಾಪಿಸಿದೆ. ಜೊತೆಗೆ ಸಭಾಸ್ಥಾನದಲ್ಲಿ ಎಲ್ಲೆಲ್ಲೂ ಕೆತ್ತಿರುವ ಜೀವರತ್ನಗಳ ಕಾಂತಿಯು ಸಭಾಸದರು ಧರಿಸಿರುವ ರತ್ನಾಭರಣಗಳ ಕಾಂತಿಯೊಡನೆ ಬೆರೆತು, ಅವರವರ ತೇಜೋಮಂಡಲಗಳ ಪ್ರಭಾವಸಂವಲಿತವಾಗಿ ಆಸ್ಥಾನವನ್ನೆಲ್ಲಾ ಬೆಳಗುತ್ತಲಿದೆ.

ದೇವೇಂದ್ರನು ಸುತ್ತಲೂ ನೊಡಿದನು. ಎಲ್ಲರೂ ಬಂದಿದ್ದಾರೆ. ಆದರೆ ದೇವಗುರುಗಳಾದ ಬೃಹಸ್ಪತಿಗಳು ಮಾತ್ರ ಬಂದಿಲ್ಲ. ಅವರ ಆಸನವೊಂದು ಬಿಡುವಾಗಿದೆ. ಶಚೀಪತಿಗೆ ಅದನ್ನು ಕಂಡು ಅಸಮಾಧಾನವಾಗಿದೆ. ಹಾಗೆಂದು ಯಾರೊಡನೆಯಾದರೂ ಹೇಳಿಕೊಳ್ಳುವುದಕ್ಕೆ ಉಂಟೇನು? ತಿರುಗಿ ಶಚಿಯನ್ನು ನೋಡಿದನು. ಪತಿಯ ಅಭಿಪ್ರಾಯವು ಆಕೆಗೆ ತಿಳಿಯಿತು. ಆದರೂ ಆಕೆಯು ತಾನೇ ಏನು ಹೇಳಿಯಾಳು?